ನವದೆಹಲಿ:ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಹಿಂದೆಂದಿಗಿಂತಲೂ ವಿಭಿನ್ನವಾಗಿರಲಿದೆ. ಅದಕ್ಕೆ ಕಾರಣ ಕೊರೊನಾ. ಈ ಸಾಂಕ್ರಾಮಿಕ ರೋಗದಿಂದಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯಲ್ಲಿ ದೇಶವು ಸಂಪೂರ್ಣವಾಗಿ ವಿಭಿನ್ನ ಸ್ವಾತಂತ್ರ್ಯ ದಿನಾಚರಣೆಗೆ ಸಾಕ್ಷಿಯಾಗಲಿದೆ.
ಈ ಹಿಂದಿನ ವರ್ಷಗಳ ಸ್ವಾತಂತ್ರ್ಯ ದಿನಾಚರಣೆಗೆ ಹೋಲಿಸಿದರೆ, ಈ ವರ್ಷ ಕೇವಲ ಶೇ.20 ಗಣ್ಯರು ಅಥವಾ ಇತರ ವ್ಯಕ್ತಿಗಳಿಗೆ ಕೆಂಪು ಕೋಟೆಯಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಪ್ರಧಾನಿ ನರೇಂದ್ರ ಮೋದಿಯ ಭಾಷಣದ ನೇರ ವೀಕ್ಷಣೆಗೆ ಅವಕಾಶವಿದೆ.
ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಮತ್ತು ಭಾರತೀಯ ಪುರಾತತ್ವ ಇಲಾಖೆಯ ಮಹಾನಿರ್ದೇಶಕರು ಕಳೆದ ವಾರವಷ್ಟೇ ಕೆಂಪು ಕೋಟೆಗೆ ಭೇಟಿ ನೀಡಿ ಇಲ್ಲಿನ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ. ಸಾಮಾಜಿಕ ಅಂತರವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ವ್ಯವಸ್ಥೆಗಳನ್ನು ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅಜಯ್ ಕುಮಾರ್ ಸೂಚನೆ ನೀಡಿದ್ದಾರೆ. ಮೂಲಗಳ ಪ್ರಕಾರ, ಈ ಬಾರಿ ಯಾವುದೇ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ. ಬದಲಾಗಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ನ ಕೆಡೆಟ್‌ಗಳು ಕೆಂಪು ಕೋಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.