ನವದೆಹಲಿ : ಪ್ರಸ್ತುತ ನಿಯಮಗಳು ಎನ್ಸಿಸಿಯಲ್ಲಿ ತೃತೀಯ ಲಿಂಗಿಗಳ ದಾಖಲಾತಿಗೆ ಅನುಮತಿ ನೀಡಿಲ್ಲ. ಅವರಿಗೂ ಇದರಲ್ಲಿ ದಾಖಲಾಗಲು ಅನುಮತಿ ನೀಡಬೇಕು ಎಂದು ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ತರುಣ್ ಕುಮಾರ್ ಐಚ್ ಅವರು ಎನ್‌ಸಿಸಿಗೆ ಮನವಿ ಮಾಡಿದ್ದಾರೆ.
ಎನ್‌ಸಿಸಿಯ ಡಿಜಿ ವಾರ್ಷಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಎನ್‌ಸಿಸಿ ಕಾಯ್ದೆ ಸೆಕ್ಷನ್ 6ರ ಪ್ರಕಾರ ತೃತೀಯ ಲಿಂಗಿಗಳ ದಾಖಲಾತಿಯನ್ನು ಹೊರತುಪಡಿಸಿರುವುದನ್ನು ಖಂಡಿಸಿ ಟ್ರಾನ್ಸ್‌ವುಮನ್ ಒಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೇರಳ ಹೈಕೋರ್ಟ್ನಲ್ಲಿ ನಡೆಯುತ್ತಿದೆ ಎಂದರು.
1948ರ ಎನ್‌ಸಿಸಿ ಕಾಯ್ದೆಯ ಪ್ರಕಾರ, ಎನ್ಸಿಸಿಯನ್ನು ನಿಯಂತ್ರಿಸಲಾಗುತ್ತಿದೆ. ಇದರ ಅಡಿಯಲ್ಲಿ ತೃತೀಯ ಲಿಂಗಿಗಳು ಹೊರಗಿದ್ದಾರೆ. ಗಂಡು ಅಥವಾ ಹೆಣ್ಣು ಎಂದು ನಮೂದಿಸುವಲ್ಲಿ ತೃತೀಯ ಲಿಂಗಿಗಳು ಎಂದು ದಾಖಲಿಸಲು ಕಾಲಂನನ್ನು ನೀಡಿಲ್ಲ. ಇದು ಈಗ ಬರಬೇಕಾಗಿದೆ ಎಂದು ಲೆ. ಜನರಲ್ ಐಚ್ ಹೇಳಿದ್ದಾರೆ.
2014ರಲ್ಲಿ ಸುಪ್ರೀಂಕೋರ್ಟ್ ಇದಕ್ಕೆ ಅನುಮತಿಸಿದೆ. ಆದರೆ, ಪ್ರಸ್ತುತ ನಮ್ಮ ನಿಯಮಗಳು ಅದಕ್ಕೆ ಅನುಮತಿಸುತ್ತಿಲ್ಲ. ಭವಿಷ್ಯದಲ್ಲಿ ಎನ್‌ಸಿಸಿಗೆ ಟ್ರಾನ್ಸ್‌ಜೆಂಡರ್‌ಗಳನ್ನು ಹೊಂದಲು ಸಾಧ್ಯವಿದೆಯೇ ಎಂದು ಕೇಳಿದಾಗ, ಇದಕ್ಕೆ ಉತ್ತರಿಸಿದ ಅವರು ಈ ವಿಷಯದ ಬಗ್ಗೆ ಉನ್ನತ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಇದರ ಬಗ್ಗೆ ನಾನು ಏನನ್ನು ಹೇಳಲು ಸಾಧ್ಯವಿಲ್ಲ. ಇದು ರಾಷ್ಟ್ರಮಟ್ಟದಲ್ಲಿ ಚರ್ಚಿಸಿ ತೆಗೆದುಕೊಳ್ಳಬೇಕಾದ ನಿರ್ಧಾರವಾಗಿದೆ ಎಂದರು.
ಓದಿ:ಮತಾಂತರ ವಿರೋಧಿ ಕಾನೂನಿಗೆ ಜೆಡಿಯು ಬೆಂಬಲಿಸಲಿ; ಬಿಜೆಪಿ
ಇದರ ನಡುವೆ ತೃತೀಯ ಲಿಂಗಿಗಳನ್ನು ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ದಾಖಲಾತಿಯಿಂದ ಹೊರಗಿಡುವುದರ ವಿರುದ್ಧ ಟ್ರಾನ್ಸ್‌ವುಮನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೇರಳ ಹೈಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ಅನು ಶಿವರಾಮನ್ ಇಂದು ಈ ಅರ್ಜಿಯ ವಿಚಾರಣೆಯನ್ನು ಆಲಿಸಿದರು. "ನಾವು ಅರ್ಜಿದಾರರಿಂದ ಉತ್ತರವನ್ನು ಅಫಿಡವಿಟ್ನಲ್ಲಿ ಸ್ವೀಕರಿಸಿದ್ದೇವೆ, ನಾವು ಹೆಚ್ಚುವರಿ ಅಫಿಡವಿಟ್ ಸಲ್ಲಿಸಲು ಬಯಸುತ್ತೇವೆ" ಎಂದು ಕೇಂದ್ರ ಸರ್ಕಾರದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ತಿರುವನಂತಪುರಂ ಯೂನಿವರ್ಸಿಟಿ ಕಾಲೇಜಿನ ತೃತೀಯಲಿಂಗಿ ವಿದ್ಯಾರ್ಥಿ ಹಿನಾ ಹನೀಫಾ ಅವರು ಕೇರಳ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.