ಕರ್ನಾಟಕ

karnataka

ETV Bharat / bharat

ದೊಡ್ಡ ರಾಷ್ಟ್ರಗಳೇ ಕೈ ಚೆಲ್ಲಿದಾಗ... ಕೊರೊನಾ ಪೀಡಿತರ ನೆರವಿಗೆ ನಿಂತ ಪುಟ್ಟದೇಶ!!! - ಕೊರಾನಾ ಪೀಡಿತ ದೇಶಗಳಿಗೆ'ಕ್ಯೂಬಾ ಸಹಾಯ

ವೈದ್ಯರ ಕೊರತೆಯಿಂದ ಬಳಲುತ್ತಿರುವ ಅದೆಷ್ಟೋ ದೇಶಗಳಿಗೆ ಕ್ಯೂಬಾ ಸಹಾಯ ಹಸ್ತ ಚಾಚಿದೆ. ಕೊರೊನಾ ವೈರಸ್ ಹೆಚ್ಚಿರುವ ದೇಶಗಳಿಗೆ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸುತ್ತಿದೆ. ಕ್ಯೂಬಾ ಕೇವಲ ಕೊರೊನಾ ವಿರುದ್ಧ ಹೋರಾಡುತ್ತಿಲ್ಲ, ಬದಲಾಗಿ ವಿಶ್ವದ ಯಾವುದೇ ದುರಂತವಾದರೂ ಮಾನವೀಯತೆ ಮೆರೆದು ಸಹಾಯ ಮಾಡುವುದರಲ್ಲಿ ಅಗ್ರ ಸ್ಥಾನದಲ್ಲಿದೆ.

'ಕ್ಯೂಬಾ
'ಕ್ಯೂಬಾ

By

Published : Apr 22, 2020, 5:25 PM IST

ಹೈದರಾಬಾದ್​: ಕೊರೊನಾದಿಂದ ಬಳಲುತ್ತಿರುವ ದೊಡ್ಡ ದೊಡ್ಡ ದೇಶಗಳು ಈಗ ವೈದ್ಯಕೀಯ ಸಹಾಯವನ್ನು ಬಯಸುತ್ತಿವೆ. ಈ ಮನವಿಗೆ ಶ್ರೀಮಂತ ದೇಶಗಳೇ ಸ್ಪಂದಿಸದಿದ್ದರೂ, ಪುಟ್ಟ ದೇಶವಾದ ಕ್ಯೂಬಾ ಸಹಾಯ ಮಾಡಲು ಧೈರ್ಯವಾಗಿ ಮುಂದೆ ಬಂದಿದೆ. ಸಾವು ಹೆಚ್ಚಾಗಿ ಸಂಭವಿಸುತ್ತಿರುವ ಇಟಲಿ ಮತ್ತು ಸ್ಪೇನ್‌ನಂತಹ ದೇಶಗಳಿಗೆ ವೈದ್ಯರು ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿದೆ.

ತಕ್ಷಣದ ಪ್ರತಿಕ್ರಿಯೆ

ಚೀನಾದ ವುಹಾನ್‌ನಲ್ಲಿ ಕೊರೊನಾ ಬೆಳಕಿಗೆ ಬರುತ್ತಿದ್ದಂತೆ ಕ್ಯೂಬಾ ತನ್ನ ದೇಶದ ವೈದ್ಯರನ್ನು ಮತ್ತು ಕೆಲ ಔಷಧಗಳನ್ನು ಚೈನಾಗೆ ಕಳುಹಿಸಿತ್ತು. ವುಹಾನ್​​ನಲ್ಲಿ ಕೊರೊನಾ ಹತೋಟಿಗೆ ಬಂದ ಬಳಿಕ ಕ್ಯೂಬಾ ವೈದ್ಯರು ಇಟಲಿಗೆ ತೆರಳಿ ಅಲ್ಲಿನ ಕೊರೊನಾ ಪೀಡಿತರಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ಕ್ಯೂಬಾ ವೈದ್ಯರಿಗೆ ಅಗ್ರ ಸ್ಥಾನ

ಕೆಲವು ದಶಕಗಳ ಹಿಂದೆ ಕ್ಯೂಬಾದಲ್ಲಿ ಅನೇಕ ಜನರು ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದರು. ಆ ವೇಳೆ ,ಯಾವುದೇ ದೇಶವು ವೈದ್ಯಕೀಯ ನೆರವು ನೀಡಿರಲಿಲ್ಲ. ಈ ಘಟನೆಯಿಂದ ಕ್ಯೂಬನ್ ಕಮ್ಯುನಿಸ್ಟ್ ಆದ ಫಿಡೆಲ್ ಕ್ಯಾಸ್ಟ್ರೊ ತಮ್ಮ ದೇಶದಲ್ಲೇ ಅತಿ ಹೆಚ್ಚು ವೈದ್ಯರನ್ನು ತಯಾರು ಮಾಡಲು ನಿರ್ಧರಿಸಿದ್ದರು. ಕ್ಯೂಬಾದಲ್ಲಿ ಪ್ರಸ್ತುತ 1000 ಜನರಿಗೆ 8.2 ವೈದ್ಯರಿದ್ದಾರೆ.

ವಿಪತ್ತು ಪೀಡಿತ ದೇಶಗಳಲ್ಲಿ ಕ್ಯೂಬಾ ಸೇವೆಗಳು

2010 ರಲ್ಲಿ ಹೈತಿಯಲ್ಲಿ ಸಂಭವಿಸಿದ ಭೂಕಂಪದ ಸಂತ್ರಸ್ತರಿಗೆ ಕ್ಯೂಬಾ ಸಹಾಯ ಹಸ್ತ ನೀಡಿತ್ತು. 2014ರಲ್ಲಿ ಎಬೊಲಾಕ್ಕೆ ತತ್ತರಿಸಿದ್ದ ಪಶ್ಚಿಮ ಆಫ್ರಿಕಾದ ಜನರಿಗೆ ನೆರವು. ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿರುವ ಬ್ರೆಜಿಲ್‌ನಲ್ಲಿ ಹಲವು ವರ್ಷಗಳಿಂದ ಕ್ಯೂಬಾ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಸುಮಾರು 77 ದೇಶಗಳಲ್ಲಿ 37,000 ಕ್ಯೂಬನ್ ವೈದ್ಯರು ಕೆಲಸ ಮಾಡುತ್ತಿದ್ದಾರೆ.

ಹಡಗು ನಿಲ್ಲಿಸಲು ಸಹ ಅವಕಾಶ

ಕಳೆದ ಮಾರ್ಚ್​​ನಲ್ಲಿ 682 ಪ್ರಯಾಣಿಕರೊಂದಿಗೆ ಬ್ರಿಟನ್‌ನಿಂದ ತೆರಳಿದ್ದ ಎಂಎಸ್ ಬ್ರೈಮರ್ ಎಂಬ ಹಡಗಿನಲ್ಲಿ ಐದು ಪ್ರಯಾಣಿಕರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು. ಇತರ ಪ್ರಯಾಣಿಕರಲ್ಲಿ ಕೂಡ ಜ್ವರದ ಲಕ್ಷಣಗಳು ಇದ್ದವು. ಕೆರಿಬಿಯನ್​​ ಮೂಲಕ ಬಂದ ಈ ಹಡಗನ್ನು ಇಳಿಸಲು ಯಾವುದೇ ದೇಶ ಒಪ್ಪಿಲಿಲ್ಲ. ಆದರೆ ಕ್ಯೂಬಾ ಧೈರ್ಯದಿಂದ ಮುಂದೆ ಬಂದು ತನ್ನ ದೇಶದ ಮರಿಯಲ್ ಡಾಕ್‌ನಲ್ಲಿ ಹಡಗನ್ನು ಇಳಿಸಲು ಸಮ್ಮತಿ ನೀಡಿತ್ತು. ಹಡಗಿನಲ್ಲಿ ಬಂದವರಿಂದ ಕೊರೊನಾ ಹರಡಬಹುದೆಂಬ ಭೀತಿಯನ್ನು ಲೆಕ್ಕಿಸದೆ ಚಿಕಿತ್ಸೆಗಾಗಿ ತನ್ನ ದೇಶದ ವಿವಿಧ ಆಸ್ಪತ್ರೆಗಳಿಗೆ ಪ್ರಯಾಣಿಕರನ್ನು ಕಳುಹಿಸಿ ವೈದ್ಯಕೀಯ ಸೇವೆ ಒದಗಿಸಿತು.

ABOUT THE AUTHOR

...view details