ಕರ್ನಾಟಕ

karnataka

ETV Bharat / bharat

ವಿಶೇಷ ಲೇಖನ: ಕಚ್ಚಾ ತೈಲ ಮತ್ತು ಕೋವಿಡ್‌-19; ಭಾರತಕ್ಕೆ ತೊಡಕುಗಳು - ಕಚ್ಚಾ ತೈಲ ಬೆಲೆ

-ಡಾ. ಮಹೇಂದ್ರ ಬಾಬು ಕುರುವಾ ಸಹಾಯಕ ಪ್ರಾಧ್ಯಾಪಕರು, ಹೆಚ್‌.ಎನ್‌.ಬಿ. ಗಢ್ವಾಲ್‌ ಕೇಂದ್ರ ವಿಶ್ವವಿದ್ಯಾಲಯ, ಉತ್ತರಾಖಂಡ

Crude Oil
ಕಚ್ಚಾ ತೈಲ

By

Published : Jun 26, 2020, 3:43 PM IST

ಜಾಗತಿಕ ಕಚ್ಚಾ ತೈಲದ ಬೆಲೆಗಳು ಮತ್ತೆ ಪುಟಿದೇಳುವಂತೆ ಕಾಣುತ್ತಿವೆ. ಸೋಮವಾರ ಶೇಕಡಾ 2.1ರಷ್ಟು ಏರಿಕೆ ಕಂಡಿದ್ದ ಬ್ರೆಂಟ್‌ ಕಚ್ಚಾ ತೈಲ ಮಂಗಳವಾರ ಬ್ಯಾರೆಲ್‌ಗೆ $43.14ಕ್ಕೆ ತಲುಪಿತು. ಇನ್ನೊಂದೆಡೆ ಏಪ್ರಿಲ್‌ 2020ರಲ್ಲಿ 21 ವರ್ಷಗಳ ಅವಧಿಯ ಅತ್ಯಂತ ಕನಿಷ್ಠ ಬೆಲೆ ದಾಖಲಿಸಿದ್ದ ಡಬ್ಲ್ಯೂಟಿಐ ಕಚ್ಚಾ ತೈಲದ ಬೆಲೆ ದುಪ್ಪಟ್ಟಿಗಿಂತ ಹೆಚ್ಚು ಏರಿಕೆ ಕಂಡಿದ್ದು, ಅದು ಇನ್ನಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ.

ಬೆಳವಣಿಗೆಗಳ ಈ ಗತಿಗೆ ಮುಖ್ಯವಾಗಿ ಮೂರು ಕಾರಣಗಳಿವೆ. ಮೊದಲನೆಯದು, ಒಪಿಇಸಿ (ಆಯಿಲ್‌ ಪ್ರೊಡ್ಯೂಸಿಂಗ್‌ ಅಂಡ್‌ ಎಕ್ಸ್‌ಪೋರ್ಟಿಂಗ್‌ ಕಂಟ್ರೀಸ್‌-ತೈಲ ಉತ್ಪಾದನೆ ಮತ್ತು ರಫ್ತು ದೇಶಗಳು)+ ದೇಶಗಳು ದಿನವೊಂದಕ್ಕೆ 97 ಲಕ್ಷ ಬ್ಯಾರೆಲ್‌ಗಳಷ್ಟು ಪೂರೈಕೆಯನ್ನು ಕಡಿತಗೊಳಿಸಿದ್ದು. ಎರಡನೆಯದು, ಅಮೆರಿಕದ ಕಚ್ಚಾ ತೈಲ ಸಂಸ್ಕರಣ ಉತ್ಪಾದನಾ ದಾಸ್ತಾನಿನಲ್ಲಿ ಕುಸಿತವಾಗಿರುವುದು ಮತ್ತು ಮೂರನೆಯ ಕಾರಣ, ಬೇಡಿಕೆಯಲ್ಲಿ ಕೊಂಚ ಮಟ್ಟಿಗಿನ ಚೇತರಿಕೆ ಕಂಡುಬಂದಿರುವುದು. ಈ ಹಿನ್ನೆಲೆಗಳ ಹೊರತಾಗಿಯೂ, ಭಾರತ ಮತ್ತು ಜಗತ್ತಿನ ಇತರ ದೇಶಗಳ ನೀತಿಗಳ ಮೇಲೆ ತೊಡಕುಗಳನ್ನು ಉಂಟು ಮಾಡಬಹುದಾದ ಈ ಕಚ್ಚಾ ತೈಲ ಬೆಲೆಗಳು ಸಣ್ಣ ಮತ್ತು ಮಧ್ಯಮ ಅವಧಿಯಲ್ಲಿ ಇಳಿಯಲಿವೆ ಎಂದು ಭಾವಿಸುವುದು ಸೂಕ್ತವೆನಿಸುತ್ತಿದೆ.

'ಅಗ್ಗದ ಕಚ್ಚಾ ತೈಲ' ಎಂಬ ಹೊಸ ವ್ಯವಸ್ಥೆ:

ಇಡೀ ಜಗತ್ತಿನಾದ್ಯಂತ ಕೋವಿಡ್‌-19 ಸಾಂಕ್ರಾಮಿಕ ಪ್ರಕರಣಗಳು ಗಾಬರಿ ಹುಟ್ಟಿಸುವ ಮಟ್ಟಿಗೆ ಏರುತ್ತಿವೆ. ತನ್ನ ದೇಶ ಕೊರೊನಾ ವೈರಸ್‌ನ 'ಎರಡನೇ ಅಲೆ'ಯ ಮಧ್ಯದಲ್ಲಿದೆ ಎಂದು ದಕ್ಷಿಣ ಕೊರಿಯಾ ಈ ವಾರ ಘೋಷಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿದ್ದೇನೆಂದರೆ, ಉತ್ತರ ಮತ್ತು ದಕ್ಷಿಣ ಅಮೆರಿಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಕೋವಿಡ್‌-19 ಪ್ರಕರಣಗಳು. ಇವು ಜಾಗತಿಕವಾಗಿ ದಾಖಲೆ ಪ್ರಮಾಣದಲ್ಲಿ ಹೆಚ್ಚುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಭಾನುವಾರ ಕಳವಳ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲದೆ, ಜಗತ್ತಿನ ಅತ್ಯಧಿಕ ಪ್ರಮಾಣದ ಕಚ್ಚಾ ತೈಲ ಆಮದು ದೇಶವಾಗಿರುವ ಚೀನಾದಲ್ಲಿ ಕೊರೊನಾ ವೈರಸ್‌ ಮತ್ತೆ ಮರುಕಳಿಸುವ ಭೀತಿ ಉಂಟಾಗಿದೆ.

ಈ ಎಲ್ಲ ಬೆಳವಣಿಗೆಗಳು ಆರ್ಥಿಕತೆಯನ್ನು ಮತ್ತಷ್ಟು ಕುಸಿತಕ್ಕೆ ದೂಡುವ ಸಾಧ್ಯತೆಗಳಿವೆ. ಅಂದರೆ, ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಕುಸಿಯುತ್ತವೆ ಹಾಗೂ ತೈಲದ ಬೇಡಿಕೆ ಇನ್ನಷ್ಟು ಕಡಿಮೆಯಾಗುತ್ತದೆ. ಅಂತಿಮವಾಗಿ, ಕಚ್ಚಾ ತೈಲ ಬೆಲೆಗಳು ಇನ್ನಷ್ಟು ಕುಸಿಯಲು ಇದು ಕಾರಣವಾಗುತ್ತವೆ. ಇನ್ನೊಂದೆಡೆ, ಕಚ್ಚಾ ತೈಲ ಬೆಲೆಗಳ ಮೇಲೆ ಸುಂಟರಗಾಳಿಯ ಋತುವಿನ ಪ್ರಾರಂಭ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಇದರಿಂದಾಗಿ ನಿಕಟ ಭವಿಷ್ಯದಲ್ಲಿ ಉತ್ತಮ ಬೆಲೆ ಪಡೆಯುವ ಭರವಸೆಗಳನ್ನು ಅದು ಕುಗ್ಗಿಸಿಬಿಟ್ಟಿದೆ. ಹೀಗಾಗಿ 'ಅಗ್ಗದ ಕಚ್ಚಾ ತೈಲ' ಎಂಬುದು ಹೊಸ ವ್ಯವಸ್ಥೆಯಾಗಲಿದ್ದು, ಜಗತ್ತು ಇದರೊಂದಿಗೆ ಬದುಕಬೇಕಾದ ಪರಿಸ್ಥಿತಿ ಬರಬಹುದು.

ಭಾರತಕ್ಕೆ ತೊಡಕುಗಳು:

ಜಗತ್ತಿನಾದ್ಯಂತದ ಭೌಗೋಳಿಕ-ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳನ್ನು ಪರಿಗಣಿಸಿದರೆ, ಕಚ್ಚಾ ತೈಲ ಬೆಲೆಗಳು ಬ್ಯಾರಲ್‌ ಒಂದಕ್ಕೆ $70ಕ್ಕೆ ನೆಗೆಯುವ ಸಾಧ್ಯತೆ ಸದ್ಯ ಸನಿಹದಲ್ಲಿ ಇಲ್ಲ ಎಂಬುದಂತೂ ಸ್ಪಷ್ಟ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳ ಹತೋಟಿಗೆ ಸಂಬಂಧಿಸಿದಂತೆ ಭಾರತದ ಪಾತ್ರ ಸೀಮಿತವಾಗಿದ್ದು, ಹೊಯ್ದಾಡುತ್ತಿರುವ ಕಚ್ಚಾ ತೈಲ ಬೆಲೆಗಳು ದೇಶದ ನೀತಿ ರೂಪಿಸುವುದರ ಮೇಲೆ ಸಾಕಷ್ಟು ವ್ಯಾಪಕ ತೊಡಕುಗಳನ್ನು ಉಂಟು ಮಾಡಲಿವೆ. ಪ್ರಸಕ್ತ ಪರಿಸ್ಥಿತಿಯಲ್ಲಿ, ಕಚ್ಚಾ ತೈಲದ ಬೆಲೆಗಳ ಇಳಿಕೆಯು ಭಾರತಕ್ಕೆ ಲಾಭಕರವೇ ಆಗಿದ್ದು, ಇದರಿಂದಾಗಿ ಇವತ್ತಿನವರೆಗೆ $507.64 ಬಿಲಿಯನ್‌ ಮೌಲ್ಯದಷ್ಟು ವಿದೇಶಿ ವಿನಿಮಯ ಸಂಗ್ರಹವಾಗಲು ಸಾಧ್ಯವಾಗಿದೆ. ಇದು ಸಾಧ್ಯವಾಗಲು ಕಾರಣವಾಗಿದ್ದು, ಸಾಮಾನ್ಯವಾಗಿ ಹೆಚ್ಚಾಗಿರುತ್ತಿದ್ದ ಕಚ್ಚಾ ತೈಲದ ಆಮದು ಪ್ರಮಾಣ ಸಾಕಷ್ಟು ಕಡಿಮೆಯಾಗಿದ್ದರಿಂದ. 2019ರಲ್ಲಿ ದಿನಕ್ಕೆ ಸರಾಸರಿ 45 ಲಕ್ಷ ಬ್ಯಾರೆಲ್‌ ಕಚ್ಚಾ ತೈಲ ಆಮದಾಗಿತ್ತು. ದೇಶದ ಈ ಭಾರಿ ಪ್ರಮಾಣದ ಆಮದಿನ ಹಿನ್ನೆಲೆಯಲ್ಲಿ, ಕಿರು ಅವಧಿ, ದೀರ್ಘಾವಧಿ ಮತ್ತು ಮಧ್ಯಮ ಅವಧಿಯ ನೀತಿಗಳನ್ನು ಆಯ್ದುಕೊಳ್ಳುವತ್ತ ಗಮನ ಹರಿಸುವ ಅವಶ್ಯಕತೆಯಿದ್ದು, ಆ ಮೂಲಕ ಪ್ರಸಕ್ತ ಪರಿಸ್ಥಿತಿಯ ಲಾಭಗಳನ್ನು ಪಡೆದುಕೊಳ್ಳಬೇಕಿದೆ.

ಕಿರು ಅವಧಿಯಲ್ಲಿ, ತಗ್ಗಿರುವ ಕಚ್ಚಾ ತೈಲದ ಬೆಲೆಗಳ ಲಾಭಗಳನ್ನು ಸಾಮಾನ್ಯ ನಾಗರಿಕರಿಗೆ ವರ್ಗಾಯಿಸಬೇಕಾದ ಅವಶ್ಯಕತೆ ಇದೆ. ಪ್ರಾರಂಭದಲ್ಲಿ ಇದು ಸಾರಿಗೆ ವೆಚ್ಚಗಳನ್ನು ತಗ್ಗಿಸುತ್ತದೆ. ಆ ಮೂಲಕ ಉತ್ಪಾದನಾ ವೆಚ್ಚಗಳಲ್ಲಿ ಇಳಿಕೆಯಾಗಿ, ಅಂತಿಮವಾಗಿ ವಸ್ತುಗಳು ಅಗ್ಗವಾಗಿ ಸಿಗುವಂತೆ ಮಾಡುತ್ತದೆ. ಇನ್ನೊಂದೆಡೆ, ಅದು ಗ್ರಾಹಕರ ಖರೀದಿ ಶಕ್ತಿಯನ್ನು ಸುಧಾರಿಸಿ ಆಂತರಿಕ ಬೇಡಿಕೆಯನ್ನು ಪ್ರಚೋದಿಸುವುದು. ಮತ್ತು ಅಂತಹ ಆರ್ಥಿಕ ಪುನಶ್ಚೇತನವು ಈಗಿನ ಅವಶ್ಯಕತೆಯೂ ಹೌದು. ಅದಾಗ್ಯೂ, ಇದಕ್ಕೆ ತದ್ವಿರುದ್ಧವಾಗಿ ಕಳೆದ ಹದಿನೈದು ದಿನಗಳಲ್ಲಿ ದೇಶದ ರಾಜಧಾನಿಯಲ್ಲಿ ಪೆಟ್ರೋಲ್‌ ಬೆಲೆಯು ಲೀಟರ್‌ಗೆ ಒಟ್ಟಾರೆ ರೂ.8.88ರಷ್ಟು ಹಾಗೂ ಡೀಸೆಲ್‌ ಬೆಲೆಯು ಲೀಟರ್‌ಗೆ ರೂ.7.97ರಷ್ಟು ಏರಿಕೆಯಾಗಿದೆ. ಸದ್ಯ ಅಗ್ಗವಾಗಿರುವ ಕಚ್ಚಾ ತೈಲದ ಬೆಲೆಗಳಿಂದ ಲಾಭ ಪಡೆದುಕೊಳ್ಳುವ ನೀತಿಯ ಅಂಗವಾಗಿ ಏರಿಕೆ ಮಾಡಲಾಗಿರುವ ತೈಲ ಬೆಲೆಗಳಿಂದ ತೆರಿಗೆ ಆದಾಯ ಬರುತ್ತದೆಯಾದರೂ, ಅಂತಿಮವಾಗಿ ಅದು ಆರ್ಥಿಕ ಪುನಶ್ಚೇತನವನ್ನೇ ಕುಗ್ಗಿಸುವ ಸಾಮರ್ಥ್ಯವನ್ನು ಹೊಂದಿದೆ. ತೈಲ ಬೆಲೆಗಳನ್ನು ಹೆಚ್ಚಿಸುವ ಮೊದಲು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಈ ಅಂಶವನ್ನು ಪರಿಗಣಿಸಬೇಕಾದ ಅವಶ್ಯಕತೆಯಿದೆ.

ಮಧ್ಯಮ ಅವಧಿಯಲ್ಲಿ, ಒಂದು ವೇಳೆ ಕಚ್ಚಾ ತೈಲ ಅಗ್ಗವಾಗಿ ಸಿಗುವಂತಿದ್ದರೆ, ಅದನ್ನು ಸಂಗ್ರಹಿಸಿಡಲು ನಮ್ಮ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು ಸಮಂಜಸ. ಸದ್ಯ ಭಾರತವು 390 ಲಕ್ಷ ಬ್ಯಾರೆಲ್‌ಗಳಷ್ಟು ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದ್ದು, ಅದರಿಂದ ಇಡೀ ದೇಶಕ್ಕೆ ಒಂಬತ್ತು ದಿನಗಳ ತೈಲ ಭದ್ರತೆಯನ್ನು ಒದಗಿಸಬಹುದು. ಆದರೆ, 5.500 ಲಕ್ಷ ಬ್ಯಾರೆಲ್‌ ಮತ್ತು 5,280 ಲಕ್ಷ ಬ್ಯಾರೆಲ್‌ನಷ್ಟು ಆಯಕಟ್ಟಿನ ತೈಲ ಮೀಸಲು ಸಾಮರ್ಥ್ಯವನ್ನು ಹೊಂದಿರುವ ಚೀನಾ ಮತ್ತು ಜಪಾನ್‌ನಂತಹ ಏಷ್ಯದ ಇತರ ದೇಶಗಳಿಗೆ ಹೋಲಿಸಿದರೆ ಈ ಪ್ರಮಾಣ ತೀರಾ ಕಡಿಮೆ. ಈ ಹಿನ್ನೆಲೆಯಲ್ಲಿ, ಮಹತ್ವದ ತೈಲ ಮೀಸಲು ಸಾಮರ್ಥ್ಯವನ್ನು ವೃದ್ಧಿಸಲು ಸಾರ್ವಜನಿಕ ಹೂಡಿಕೆ ಪ್ರಮಾಣವನ್ನು ಹೆಚ್ಚಿಸುವ ಅವಶ್ಯಕತೆಯಿದೆ. ಇದರಿಂದ ಕೇವಲ ಅಗ್ಗದ ತೈಲ ಸಂಗ್ರಹ ಸಾಧ್ಯವಾಗುವುದಷ್ಟೇ ಅಲ್ಲ, ದುಡಿಯುವ ವರ್ಗಕ್ಕೆ ಉದ್ಯೋಗದ ಅವಕಾಶಗಳು ಮತ್ತು ನಿರ್ಮಾಣ ವಸ್ತುಗಳ ಬೇಡಿಕೆಯನ್ನು ಅದು ಹೆಚ್ಚಿಸುತ್ತದೆ. ಈ ಕಠಿಣ ಕಾಲದಲ್ಲಿ ಇವೆರಡೂ ಅತಿ ಹೆಚ್ಚು ಬೇಡಿಕೆಯಲ್ಲಿರುವಂಥವು.

ದೀರ್ಘಾವಧಿಯಲ್ಲಿ, ಭಾರತವು ಕ್ರಮೇಣ ನವೀಕರಿಸಬಹುದಾದ ಇಂಧನ ಮೂಲಗಳತ್ತ ಹೊರಳುವುದು ಮಹತ್ವದ ಅವಶ್ಯಕತೆ. ಇದರ ಜೊತೆಗೆ, ಅದು ಇಂಧನ ಸ್ವಾವಲಂಬಿಯಾಗಲೂ ಪ್ರಯತ್ನಿಸಬೇಕಿದೆ. ಏಕೆಂದರೆ, ಕಚ್ಚಾ ತೈಲ ಬೆಲೆಗಳು ತೀರಾ ಚಂಚಲವಾಗಿದ್ದು, ಭಾರತದ ಹತೋಟಿಯಾಚೆಗಿನ ಬೆಳವಣಿಗೆಗಳಿಗೆ ಒಳಪಟ್ಟಿರುವಂಥವು. ದೇಶದ ಇಂಧನ ಭದ್ರತೆಗೆ ಇಂತಹ ಮೂಲಗಳ ಮೇಲಿನ ದೀರ್ಘಾವಧಿ ಅವಲಂಬನೆಯು ದೇಶದ ಆರ್ಥಿಕ ಮತ್ತು ಪ್ರಾಮುಖ್ಯತೆಯ ದೃಷ್ಟಿಯಿಂದಲೂ ವೆಚ್ಚದಾಯಕವಾಗುತ್ತವೆ.

ಎಷ್ಟು ಬೇಗ ನಾವು ಈ ಕ್ರಮಗಳನ್ನು ಕೈಗೊಳ್ಳುತ್ತೇವೆಯೋ, ಅಷ್ಟು ಉತ್ತಮ. ಅದಕ್ಕೆ ಬೇಕಿರುವುದು ಬಲವಾದ ರಾಜಕೀಯ ಇಚ್ಛಾಶಕ್ತಿ ಮಾತ್ರ.

ABOUT THE AUTHOR

...view details