ಜಮ್ಮು: ಭೂ ಕುಸಿತದಿಂದ ಮಣ್ಣಿನಡಿ ಹುದುಗಿಹೋಗಿದ್ದ ವ್ಯಕ್ತಿಯನ್ನು ಸಿಆರ್ಪಿಎಫ್ಗೆ ಸೇರಿದ ಶ್ವಾನವೊಂದು ಪತ್ತೆ ಮಾಡಿ, ರಕ್ಷಣೆ ಮಾಡಲು ಸಹಕರಿಸಿದ ವಿಶೇಷ ಘಟನೆ ಕಣಿವೆ ರಾಜ್ಯದಲ್ಲಿ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ರಂಬಾನ್ ಜಿಲ್ಲೆಯ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಳಿಯ ಮೈಲಿಗಲ್ಲು 147ರ ಬಳಿ ವ್ಯಕ್ತಿಯೊಬ್ಬ ಭೂ ಕುಸಿತಕ್ಕೆ ಸಿಲುಕಿ, ಮಣ್ಣಿನಡಿ ಹುದುಗಿಹೋಗಿದ್ದ. ಸಿಆರ್ಪಿಎಫ್ನ ಅಜಾಕ್ಸಿ ಹೆಸರಿನ ಶ್ವಾನ ಈತನನ್ನು ಪತ್ತೆ ಮಾಡಿದ ಬಳಿಕ ಸುರಕ್ಷಿತವಾಗಿ ಹೊರತರಲಾಗಿದೆ.
ಸಿಆರ್ಪಿಎಫ್ನ 72ನೇ ಬೆಟಾಲಿಯನ್ ಬಾಂಬ್ ನಿಷ್ಕ್ರಿಯ ದಳ ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಶ್ವಾನ ಮೈಲಿಗಲ್ಲು ಬಳಿ ಬಂದು ಏನನ್ನೋ ಸೂಚಿಸಿ ಬೊಗಳಿದೆ. ತಕ್ಷಣ ಅಲ್ಲಿದ್ದವರು ಆ ಜಾಗವನ್ನು ಅಗೆದು ನೋಡಿದಾಗ, ವ್ಯಕ್ತಿಯೊಬ್ಬ ಸಿಲುಕಿದ್ದು ಪತ್ತೆಯಾಗಿದೆ. ಕೆಲ ಸೈನಿಕರು ಸಹ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿ, ವ್ಯಕ್ತಿಯನ್ನು ಮಣ್ಣಿನಿಂದ ಹೊರಗೆಳೆದು ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟವನನ್ನು ಲುಧ್ವಾಲಾ ಗ್ರಾಮದ ಪ್ರದೀಪ್ ಕುಮಾರ್ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ತೀವ್ರ ಆಘಾತಕ್ಕೊಳಗಾಗಿದ್ದ ಪ್ರದೀಪ್ ಸದ್ಯ ಮಾತನಾಡುವ ಸ್ಥಿತಿಯಲ್ಲಿಲ್ಲ. ಆತನಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಸಿಆರ್ಪಿಎಫ್ ಪಿಆರ್ಒ ಆಶಿಶ್ ಕುಮಾರ್ ಝಾ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಶ್ವಾನದ ಕಾರ್ಯಕ್ಕೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ.