ಕರ್ನಾಟಕ

karnataka

ETV Bharat / bharat

ಪುನರಾವರ್ತನೆ ಆಗುತ್ತಲೇ ಇದೆ ಮಹತ್ವದ ಸಂಸ್ಥೆಗಳ ನೇಮಕದಲ್ಲಿನ ಲೋಪ - ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ

ಯಾರೇ ಅಧಿಕಾರದಲ್ಲಿ ಇದ್ದರೂ, ಪ್ರಮುಖ ಸಾಂವಿಧಾನಿಕ ಸ್ಥಾನಗಳಿಗೆ ನೇಮಕಾತಿ ಮಾಡುವ ಶೈಲಿ ಮಾತ್ರ ಒಂದೇ ರೀತಿ ಇದೆ. ಇದು ರಾಜಕೀಯ ಅಟ್ಟಹಾಸಕ್ಕೆ ಎಡೆ ಮಾಡಿಕೊಟ್ಟಿದೆ. ಸಿವಿಸಿ ( ಕೇಂದ್ರ ಜಾಗೃತ ಆಯೋಗ ) ಮತ್ತು ಕೇಂದ್ರ ಮಾಹಿತಿ ಆಯೋಗಕ್ಕೆ ( ಸಿ ಐ ಸಿ ) ಮುಖ್ಯಸ್ಥರ ನೇಮಕಾತಿ ಪ್ರಕ್ರಿಯೆ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದ್ದು, ನೇಮಕ ಪ್ರಕ್ರಿಯೆ ಅಕ್ರಮಗಳಿಂದ ಕೂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Credibility of key institutions
ಮಹತ್ವದ ಸಂಸ್ಥೆಗಳ ನೇಮಕಾತಿಯಲ್ಲಿನ ಲೋಪ

By

Published : Feb 27, 2020, 6:52 PM IST

ಕೆ. ವಿ. ಚೌಧರಿ ಅವರ ಅಧಿಕಾರದ ಅವಧಿ ಪೂರ್ಣಗೊಂಡ ಪರಿಣಾಮ, 2019 ರ ಜೂನ್ 9 ರಿಂದ ಮುಖ್ಯ ಜಾಗೃತ ಆಯುಕ್ತರ ಹುದ್ದೆ ಖಾಲಿ ಇತ್ತು. ಇದುವರೆಗೆ ಭಾರತದ ರಾಷ್ಟ್ರಪತಿಗಳ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಸಂಜಯ್ ಕೊಠಾರಿ ಅವರು ಈಗ ಈ ಸ್ಥಾನ ಅಲಂಕರಿಸಿದ್ದಾರೆ. ಅಲ್ಲದೇ, ಸುಧೀರ್‌ ಭಾರ್ಗವ್ ಅವರ ಅಧಿಕಾರಾವಧಿ ಪೂರ್ಣಗೊಂಡ ನಂತರ ಬಿಮಾಲ್ ಜುಲ್ಕಾ ಅವರನ್ನು ಕೇಂದ್ರ ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಪ್ರಧಾನಿ ಅಧ್ಯಕ್ಷತೆಯ ಆಯ್ಕೆ ಸಮಿತಿ ಈ ನೇಮಕಾತಿಗಳನ್ನು ಅಂತಿಮಗೊಳಿಸಿದೆ. ಪರಿಶೀಲನೆಗಾಗಿ ಅಂತಿಮ ಪಟ್ಟಿಯನ್ನು ಪ್ರತಿಪಕ್ಷದ ನಾಯಕನಿಗೆ ನೀಡುವಂತೆ ಪ್ರಧಾನಿ ನಿರ್ದೇಶನ ನೀಡಿದ್ದರೂ, ಅದು ಕಾರ್ಯರೂಪಕ್ಕೆ ಬಂದಿಲ್ಲ. ಇದು ಮೊದಲ ಆಕ್ಷೇಪಣೆ.

ಎರಡನೆಯದಾಗಿ, ಸೂಕ್ತ ಅಭ್ಯರ್ಥಿಯನ್ನು ಗುರುತಿಸಲು ನೇಮಿಸಲಾದ ಶೋಧನಾ ಸಮಿತಿಯ ಸದಸ್ಯರೊಬ್ಬರ ಹೆಸರನ್ನೇ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸೇರಿಸಿರುವುದು ವಿವಾದದ ಕಿಡಿ ಹೊತ್ತಿಸಿದೆ. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರ ಆಕ್ಷೇಪಣೆ ಬದಿಗಿಟ್ಟು, ಬಹುಮತದ ನಿರ್ಧಾರ ಕೈಗೊಳ್ಳುವ ಮೂಲಕ ಕೇಂದ್ರ ಸರ್ಕಾರ ನೇಮಕಾತಿ ಪ್ರಕ್ರಿಯೆ ನಡೆಸಿದೆ. ಸರ್ಕಾರದ ‘ಆಜ್ಞೆ’ ಅಂತಿಮ ಮಾತು ಎಂದಾದಾಗ ಅಂತಹ ಆಯ್ಕೆ ಪ್ರಕ್ರಿಯೆ ಯಾವ ಉದ್ದೇಶಕ್ಕೆ ನೆರವಾಗುತ್ತವೆ ಎಂಬ ಬಗ್ಗೆ ನಿಜವಾದ ಅನುಮಾನಗಳು ಮೊಳೆಯುತ್ತವೆ. ಕಳೆದ ವರ್ಷ, ಈ ಸಮಯದಲ್ಲಿ, ಸಿಬಿಐನ ಹೊಸ ನಿರ್ದೇಶಕರಾಗಿ ರಿಷಿ ಕುಮಾರ್ ಅವರನ್ನು ನೇಮಕ ಮಾಡುವಾಗಲೂ, ಭ್ರಷ್ಟಾಚಾರ ಪ್ರಕರಣಗಳ ವಿಚಾರಣಾ ಪ್ರಕ್ರಿಯೆಯ ಆಳ ಅಗಲ ಗೊತ್ತಿಲ್ಲದ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿದೆ ಎಂಬ ಆಕ್ಷೇಪಗಳು ಕೇಳಿಬಂದವು.

ಹುದ್ದೆಯ ಘನತೆ ಹೆಚ್ಚಿಸುವ ಪ್ರಾಮಾಣಿಕ ಮತ್ತು ನೇರ ನಡೆ- ನುಡಿಯ ವ್ಯಕ್ತಿಗಳಿಗೆ ಆದ್ಯತೆ ನೀಡುವ ಬದಲು, ಇತರ ಅಂಶಗಳು ಹೆಚ್ಚು ಪ್ರಭಾವ ಬೀರುತ್ತಿವೆ. ಅಂತಹ ಸಣ್ಣ ಸಣ್ಣ ಆಕ್ಷೇಪಣೆಗಳಿಂದಾಗಿ, ಆಯ್ಕೆ ಪ್ರಕ್ರಿಯೆ ಅಪಹಾಸ್ಯಕ್ಕೆ ಒಳಗಾಗುತ್ತಿದೆ. ಇಂತಹ ವಿಷಯಗಳಲ್ಲಿ ಸುಪ್ರೀಂಕೋರ್ಟ್ ಸ್ವತಃ ಮಧ್ಯಪ್ರವೇಶ ಮಾಡಿ ಸ್ಫೂರ್ತಿ ತುಂಬಿದ್ದರೂ ಕೂಡ, ರಾಜಕೀಯ ವ್ಯವಸ್ಥೆ ತನ್ನ ಕಾರ್ಯವೈಖರಿ ಬದಲಾವಣೆ ಮಾಡಿಕೊಳ್ಳುತ್ತಿಲ್ಲ. ಇದರಿಂದಾಗಿ ಸಾಂವಿಧಾನಿಕ ಸಂಸ್ಥೆಗಳಿಗೆ ಗ್ರಹಣ ಹಿಡಿದಂತೆ ಆಗಿದೆ.

ಭ್ರಷ್ಟಾಚಾರ ರಾಜಕೀಯ ಪ್ರಜ್ಞೆಯ ಭಾಗವಾದ ದಿನದಿಂದಲೂ ಸಂಸ್ಥೆಗಳ ಅವನತಿ ಆತಂಕಕಾರಿ ರೀತಿಯಲ್ಲಿ ಶುರು ಆಗಿದೆ. ಯಾರಿಗಾದರೂ ಆಡಳಿತ ಪಕ್ಷದ ಆಶೀರ್ವಾದ ದೊರೆತರೆ, ಅವರು ಪ್ರಮುಖ ಸಾಂವಿಧಾನಿಕ ಸ್ಥಾನಗಳಿಗೆ ನುಸುಳಬಹುದು, ಅದು ಸ್ವಜನಪಕ್ಷಪಾತ ಮತ್ತು ರಾಜಕೀಯ ಸಂಚಲನಕ್ಕೆ ಕಾರಣ ಆಗುತ್ತದೆ ಎಂದು ಬಿಜೆಪಿ ಹಿರಿಯ ನಾಯಕ, ಎಲ್. ಕೆ. ಅಡ್ವಾಣಿ ಅವರು 2012 ರಲ್ಲಿ ಅಲವತ್ತುಕೊಂಡಿದ್ದರು. ಯುಪಿಎ ಆಳ್ವಿಕೆಯ ಅವಧಿಯಲ್ಲಿ ನವೀನ್ ಚಾವ್ಲಾ ಅವರನ್ನು ಚುನಾವಣಾ ಆಯುಕ್ತ ಹುದ್ದೆಗೆ ನೇಮಕ ಮಾಡಿದ್ದು, ಎಷ್ಟು ವಿವಾದಕ್ಕೆ ತುತ್ತಾಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಅಂದಿನ ಮುಖ್ಯ ಚುನಾವಣಾ ಆಯುಕ್ತ ಗೋಪಾಲಸ್ವಾಮಿ ಅವರು ಭಾರತದ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ, ನವೀನ್ ಚಾವ್ಲಾ ಅವರ ಸ್ವಜನ ಪಕ್ಷಪಾತದ ಕುಕೃತ್ಯಗಳನ್ನು ವಿವರಿಸಿದ್ದರು.

ಆಡಳಿತ ಪಕ್ಷದೊಂದಿಗಿನ ನಂಟಿನಿಂದಾಗಿ ಚಾವ್ಲಾ ಅವರು ನಿರ್ವಚನ್‌ ಸದನದ ರಹಸ್ಯಗಳನ್ನು ಸೋರಿಕೆ ಮಾಡಿದ ಕುರಿತು ರಾಷ್ಟ್ರಪತಿ ಅವರಿಗೆ ಬರೆದ ಪತ್ರದಲ್ಲಿ ಪ್ರಸ್ತಾಪಿಸಿದ್ದರು. ಇದನ್ನು ಗಮನದಲ್ಲಿ ಇರಿಸಿಕೊಂಡು, ಅಡ್ವಾಣಿ ಅವರು ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರತಿಪಕ್ಷಗಳಿಗೂ ಸ್ಥಾನ ಸಿಗುವಂತೆ ಪ್ರಧಾನಿ, ಮುಖ್ಯ ನ್ಯಾಯಮೂರ್ತಿ, ಕೇಂದ್ರ ಕಾನೂನು ಸಚಿವರು, ಲೋಕಸಭೆ ಮತ್ತು ರಾಜ್ಯಸಭೆ ಪ್ರತಿಪಕ್ಷ ನಾಯಕರನ್ನು ಒಳಗೊಂಡ ಕೊಲಿಜಿಯಂ ರಚನೆ ಮಾಡಬೇಕು ಎಂದು ಸಲಹೆ ನೀಡಿದ್ದರು.

ಇದಲ್ಲದೆ, ಪಿಜೆ ಥಾಮಸ್ ಅವರನ್ನು ಮುಖ್ಯ ಜಾಗೃತ ಆಯುಕ್ತರನ್ನಾಗಿ ಮನಮೋಹನ್ ಸಿಂಗ್ ಸರ್ಕಾರ ನೇಮಕ ಮಾಡಿತು. ನಂತರ ಅದನ್ನು ಸುಪ್ರೀಂಕೋರ್ಟಿನಲ್ಲಿ ಸಮರ್ಥನೆ ಮಾಡಿಕೊಂಡ ರೀತಿ ಸರ್ಕಾರಕ್ಕೆ ಕಳಂಕದಾಯಕವಾಗಿತ್ತು. ಸಿ ವಿ ಸಿ ನೇಮಕಾತಿ ಕುರಿತಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನೊಂದಿಗೆ ಯುಪಿಎ ಸರ್ಕಾರ ಕ್ಷಮೆ ಕೇಳುವಂಥ ಸ್ಥಿತಿ ತಂದುಕೊಂಡಿತು. ಥಾಮಸ್ ವಿರುದ್ಧದ ಪಾಮ್ ಒಲಿನ್ ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇರುವುದರಿಂದ ಪ್ರತಿಪಕ್ಷ ನಾಯಕರಾಗಿದ್ದ, ಸುಷ್ಕಾ ಸ್ವರಾಜ್ ಅವರು ಸಮಿತಿಯ ಇಬ್ಬರು ಸದಸ್ಯರಲ್ಲಿ ಒಬ್ಬರಿಗೆ ಒಪ್ಪಿಗೆ ಸೂಚಿಸಿದ್ದರು. ಸುಪ್ರೀಂಕೋರ್ಟ್ ಸ್ಪಷ್ಟವಾದ ಅರ್ಹತಾ ಮಾನದಂಡಗಳನ್ನು ಮತ್ತು ನಿಸ್ಪಕ್ಷಪಾತವಾದ ನೈತಿಕ ಮೌಲ್ಯಗಳನ್ನು ರೂಪಿಸಿದ್ದರೂ, ಸರ್ಕಾರಗಳು ಅವುಗಳಿಗೆ ವಿಶ್ವಾಸಾರ್ಹತೆ ನೀಡುವ ಕೆಲಸಕ್ಕೆ ಮುಂದಾಗಿಲ್ಲ.

ಚುನಾವಣಾ ಆಯೋಗ, ಕೇಂದ್ರ ಜಾಗೃತ ಆಯೋಗ, ಮಹಾಲೇಖಪಾಲರು (ಸಿ ಎ ಜಿ), ಕೇಂದ್ರ ಮಾಹಿತಿ ಆಯೋಗ, ಸಿ ಬಿ ಐ - ಇವೆಲ್ಲವೂ ಜನರ ಕಲ್ಯಾಣಕ್ಕಾಗಿ ರೂಪುಗೊಂಡ ಪ್ರಮುಖ ಸಂಸ್ಥೆಗಳು. ನಿರ್ವಚನ್‌ ಸದನ ಹೊರತುಪಡಿಸಿ, ಉಳಿದವುಗಳೆಲ್ಲ ಭ್ರಷ್ಟಾಚಾರ ಹೋಗಲಾಡಿಸಲು ಮತ್ತು ಸಾರ್ವಜನಿಕ ಹಿತಾಸಕ್ತಿ ಕಾಪಾಡಲು ಟೊಂಕ ಕಟ್ಟಿ ನಿಂತಿವೆ. ಈ ಸಂಸ್ಥೆಗಳು ಒತ್ತಡಗಳಿಗೆ ಬಲಿಯಾಗದೆ ಪ್ರಾಮಾಣಿಕ ವ್ಯಕ್ತಿಗಳ ನಿರ್ದೇಶನದಲ್ಲಿ ಕೆಲಸ ಮಾಡಿದರೆ, ಭಾರತ "ಭ್ರಷ್ಟ ರಾಷ್ಟ್ರಗಳ" ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿರಲಿಲ್ಲ. ಸಿಬಿಐ ನಿರ್ದೇಶಕರಾಗಿ ರಂಜಿತ್ ಸಿನ್ಹಾ ಅವರು ಈ ಹಿಂದೆ ನಾಚಿಕೆ ಇಲ್ಲದ ಕೃತ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಪ್ರಕರಣಗಳ ಮೇಲೆ ಪ್ರಭಾವ ಬೀರಲು ಪ್ರಯತ್ನ ನಡೆಸಿದ್ದಾರೆ.

ಇತ್ತೀಚೆಗೆ, ಅಲೋಕ್ ವರ್ಮಾ ಮತ್ತು ಆಸ್ತಾನಾ ಅವರ ನಡುವೆ ನಡೆದ ಪರಸ್ಪರ ಆರೋಪ- ಪ್ರತ್ಯಾರೋಪಗಳು ಸಂಸ್ಥೆಯನ್ನು ಅಪಹಾಸ್ಯಕ್ಕೆ ಈಡು ಮಾಡಿವೆ. ಮೂರು ತಿಂಗಳ ಒಳಗೆ ಕೇಂದ್ರ ಮತ್ತು ರಾಜ್ಯ ಮಟ್ಟದ ಮಾಹಿತಿ ಆಯೋಗಗಳಲ್ಲಿನ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿರುವ ಹಿನ್ನೆಲೆಯಲ್ಲಿ, ಈ ಆಯೋಗಗಳನ್ನು ತಮ್ಮ ಅನುಕೂಲಕರ ಪುನರ್ವಸತಿ ಕೇಂದ್ರಗಳನ್ನಾಗಿ ರೂಪಿಸಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ. ಲೋಕಪಾಲ್ ಹುದ್ದೆ ಸೃಷ್ಟಿಸಿ ಆರು ವರ್ಷಗಳು ಕಳೆದುಹೋದರೂ, ಅದಕ್ಕೆ ವಿಚಾರಣೆ ನಡೆಸುವ ಅಧಿಕಾರ ನೀಡದೇ ಇರುವುದು ಹತಾಶೆಗೆ ಕಾರಣವಾಗಿದೆ.

ಚುನಾವಣಾ ಆಯುಕ್ತರ ನೇಮಕಕ್ಕೆ ಸ್ವಾಯತ್ತ ಸಂಸ್ಥೆ ರಚಿಸಲು ಸುಪ್ರೀಂಕೋರ್ಟ್ 2018 ರ ಅಕ್ಟೋಬರ್‌ನಲ್ಲಿ ಸೂಚನೆ ನೀಡಿದೆ. ಸರ್ವಾನುಮತದಿಂದ ನೇಮಕಾತಿ ಮಾಡಲು ಸಾಧ್ಯವಾಗದೆ ಇರಬಹುದು ಮತ್ತು ಅಂತಹ ಖಾಲಿ ಹುದ್ದೆಗಳನ್ನು ಎಂದಿಗೂ ಭರ್ತಿ ಮಾಡಲಾಗದು ಎಂಬುದು ಕಾನೂನು ಆಯೋಗದ ಅಭಿಪ್ರಾಯ. ಇದು ರಾಷ್ಟ್ರೀಯ ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಇರುವ ವಿಷಕಾರಿ ಸಂಸ್ಕೃತಿಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ನಿಷ್ಪಕ್ಷಪಾತ ತನಿಖಾ ಸಂಸ್ಥೆಗಳನ್ನು ನಡೆಸುವಲ್ಲಿ ನಾವು ಅಮೆರಿಕ, ರಷ್ಯಾ, ಜರ್ಮನಿ, ಜಪಾನ್ ನೀತಿಗಳನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ, ಅಂತಹ ಸಂಸ್ಥೆಗಳ ಬಗ್ಗೆ ಭಾರತದಲ್ಲಿ ಕೂಡ ಗೌರವ ಹೆಚ್ಚುತ್ತದೆ.

ABOUT THE AUTHOR

...view details