ಹೈದರಾಬಾದ್:ನೈಸರ್ಗಿಕರಣ, ಶಾಶ್ವತ ರೆಸಿಡೆನ್ಸಿ (ಗ್ರೀನ್ ಕಾರ್ಡ್), ಕುಟುಂಬ, ನಿರಾಶ್ರಿತರು ಮತ್ತು ದತ್ತು ಸ್ವೀಕಾರದಂತಹ ಪೌರತ್ವ ಪಡೆಯಲು ವಲಸೆ ವೀಸಾಗಳನ್ನು ನೀಡಲು ಯುನೈಟೆಡ್ ಸ್ಟೇಟ್ಸ್ ಅಮೆರಿಕವು ಐದು ವಿಧವಾದ ವ್ಯಾಖ್ಯಾನಿಸಲಾದ ವರ್ಗಗಳನ್ನು ಹೊಂದಿದೆ.
ಇದರ ಜೊತೆಗೆ, ಹೆಚ್1ಬಿ, ಹೆಚ್2ಬಿ, ಜೆ ಮತ್ತು ಎಲ್ ವೀಸಾಗಳನ್ನು ನೀಡುವ ಮೂಲಕ ಅಮೆರಿಕವು ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅಲ್ಪಾವಧಿಯ ವಲಸಿಗರಲ್ಲದವರ ಪ್ರವೇಶವನ್ನು ಇದು ನಿಯಂತ್ರಿಸುತ್ತದೆ. ಈ ವಲಸೆರಹಿತ ವರ್ಗವನ್ನೇ ಟ್ರಂಪ್ ಆಡಳಿತವು ಕೆಲವು ನಿರ್ದಿಷ್ಟ ಹೊಸ ನಿರ್ಬಂಧಗಳೊಂದಿಗೆ 2020 ರ ಜೂನ್ 24 ರಿಂದ 2020 ಡಿಸೆಂಬರ್ 31 ರವರೆಗೆ ಯುನೈಟೆಡ್ ಸ್ಟೇಟ್ಸ್ ಅಮೆರಿಕಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿದೆ.
ವಿಶೇಷ ಉದ್ಯೋಗಗಳಲ್ಲಿ ವಿಶ್ವವಿದ್ಯಾಲಯದ ಪದವಿ ಹೊಂದಿರುವ ವಿದೇಶಿ ಉದ್ಯೋಗಿಗಳನ್ನ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಯುನೈಟೆಡ್ ಸ್ಟೇಟ್ಸ್ ಅಮೆರಿಕದ ಉದ್ಯೋಗದಾತರಿಗೆ 1990 ರ ಅಮೆರಿಕದ ವಲಸೆ ಕಾಯ್ದೆಯಡಿ ಹೆಚ್1ಬಿ ವೀಸಾ ನೀಡಲಾಗುತ್ತದೆ. ಸಾಮಾನ್ಯವಾಗಿ ಈ ವೀಸಾ 3 ರಿಂದ 6 ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ. ಬಳಿಕ ವೀಸಾ ಪಡೆದ ಅವನು / ಅವಳು ನೇಮಕಗೊಂಡ ಸ್ಥಾನದ ನಂತರ ಯುನೈಟೆಡ್ ಸ್ಟೇಟ್ಸ್‌ನಿಂದ ಅವಧಿ ಮುಗಿಯುವವರೆಗೂ ಹೊರ ಹೋಗುವಂತಿಲ್ಲ.
ಅಮೆರಿಕದ ಉದ್ಯೋಗದಾತ ಪ್ರಾಯೋಜಿಸಿದ ತಾತ್ಕಾಲಿಕ ಕೆಲಸಕ್ಕಾಗಿ 6 ತಿಂಗಳಿನಿಂದ ಒಂದು ವರ್ಷದವರೆಗೆ ಯುನೈಟೆಡ್ ಸ್ಟೇಟ್ಸ್ ಪ್ರವೇಶಿಸಲು ಯಾವುದೇ ನಿರ್ದಿಷ್ಟ ಶೈಕ್ಷಣಿಕ ಅಥವಾ ನಿರ್ದಿಷ್ಟ ಅಗತ್ಯವಿಲ್ಲದೆ 81 ಗೊತ್ತುಪಡಿಸಿದ ದೇಶಗಳ (ಭಾರತವನ್ನು ಹೊರತುಪಡಿಸಿ) ಕೃಷಿಯೇತರ ಕಾರ್ಮಿಕರಿಗೆ ಹೆಚ್2ಬಿ ವೀಸಾ ನೀಡಲಾಗುತ್ತದೆ. ಜಾಗತಿಕ ಜ್ಞಾನಾರ್ಜನೆ ದೃಷ್ಟಿಯಿಂದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಲಯದ ವ್ಯಕ್ತಿಗಳಿಗೆ ಜೆ ವೀಸಾಗಳನ್ನು ನೀಡಲಾಗುತ್ತದೆ ಮತ್ತು ಅವರ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ ಈ ವೀಸಾದಾರರು ತಮ್ಮ ಮೂಲ ದೇಶಕ್ಕೆ ಮರಳಬೇಕು. ಯುನೈಟೆಡ್ ಸ್ಟೇಟ್ಸ್ ಕಂಪನಿಗಳಿಗೆ ಹೊರದೇಶಗಳಿಂದ ಕೆಲಸ ಮಾಡುವ ಕಾರ್ಯನಿರ್ವಾಹಕರಿಗೆ ಎಲ್ ವೀಸಾಗಳನ್ನು ನೀಡಲಾಗುತ್ತದೆ, ಅಮೆರಿಕದ ತಮ್ಮ ಕಂಪನಿಗಳಿಂದ ತಾತ್ಕಾಲಿಕ ಅಥವಾ ವಿಶೇಷ ಕೆಲಸಕ್ಕಾಗಿ ಕಳುಹಿಸಲ್ಪಟ್ಟವರಿಗೆ ಈ ವೀಸಾ ಅನ್ವಯವಾಗಲಿದೆ.
ಕೋವಿಡ್ -19 ಏಕಾಏಕಿ ಅಮೆರಿಕಕ್ಕೆ ವಕ್ಕರಿಸಿದ 60 ದಿನಗಳ ನಂತರ ಅಮೆರಿಕ ಕಾರ್ಮಿಕ ಮಾರುಕಟ್ಟೆಗೆ ಅಪಾಯವನ್ನುಂಟುಮಾಡುವ ವಲಸಿಗರ ಪ್ರವೇಶವನ್ನು ಅಮಾನತುಗೊಳಿಸಿ ಟ್ರಂಪ್ ಆಡಳಿತವು ಏಪ್ರಿಲ್ 22, 2020 ರ ಕ್ರಮವನ್ನು ಜಾರಿಗೆ ತಂದಿದೆ. ಆದರೆ, ಏಪ್ರಿಲ್ ಅಧಿಸೂಚನೆಯಲ್ಲಿ H1B / H2B / L ವಿಭಾಗಗಳನ್ನು ಸೇರಿಸಲಾಗಿರಲಿಲ್ಲ.
2020 ರ ನವೆಂಬರ್‌ನಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳು ನಡೆಯುವ ತನಕ ಯುನೈಟೆಡ್ ಸ್ಟೇಟ್ಸ್‌ಗೆ ವಲಸೆರಹಿತ ವಿದೇಶಿಗರಿಗೆ ಪ್ರವೇಶ ನಿಷೇಧವು ಜಾರಿಯಲ್ಲಿರುತ್ತದೆ. ಈ ಕ್ರಮವು ಅಧ್ಯಕ್ಷ ಟ್ರಂಪ್ ಅನುಸರಿಸುತ್ತಿರುವ ವಿದೇಶಿ ವಿರೋಧಿ ನೀತಿಯ ಮತ್ತೊಂದು ಉದಾಹರಣೆಯಾಗಿದೆ. ಮುಂಬರುವ ಚುನಾವಣೆಯಲ್ಲಿ ಅಮೆರಿಕನ್ನರ ಒಲಿಸಿಕೊಂಡು ಚುನಾವಣೆ ಗೆಲ್ಲುವ ಟ್ರಂಪ್ ಯೋಜನೆ ಇದರಲ್ಲಿದೆ. .
ಟ್ರಂಪ್ ಆಡಳಿತವು ತಮ್ಮ ವಲಸೆ-ವಿರೋಧಿ ನೀತಿಯನ್ನು ಕಳೆದ ಮೂರು ವರ್ಷಗಳಲ್ಲಿ ಸ್ಥಿರವಾಗಿ ಜಾರಿಗೆ ತರುತ್ತಾ ಬಂದಿದೆ. ಆಫ್ರಿಕನ್ ಮತ್ತು ಮುಸ್ಲಿಂ ಬಹುಸಂಖ್ಯಾತ ದೇಶಗಳಿಂದ ಯುನೈಟೇಡ್ ಸ್ಟೇಟ್ಸ್ ಆಫ್ ಅಮೆರಿಕಕ್ಕೆ ಪ್ರಯಾಣ ನಿಷೇಧವನ್ನು ವಿಧಿಸಿದೆ ಮತ್ತು ಆ ಜನರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಲ್ಲಿ ಆಶ್ರಯ ಪಡೆಯುವುದು ಅಸಾಧ್ಯವಾಗಿದೆ. ಅಮೆರಿಕದ ದಕ್ಷಿಣ ಭಾಗದಿಂದ ದೇಶವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವ ಅಕ್ರಮ ವಲಸಿಗರನ್ನು ಹೊರಗಿಡಲು ಯುನೈಟೆಡ್ ಸ್ಟೇಟ್ಸ್-ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಿಸಲು ಅಧ್ಯಕ್ಷ ಟ್ರಂಪ್ ವೈಯಕ್ತಿಕ ಆಸಕ್ತಿ ವಹಿಸಿದ್ದಾರೆ. ಅಮೆರಿಕಕ್ಕೆ ವಲಸೆಯನ್ನು ನಿಯಂತ್ರಿಸುವ ಜವಾಬ್ದಾರಿ ಹೊಂದಿರುವ ಅಧಿಕಾರಶಾಹಿ ರಚನೆಯಾಗಿರುವ ಅಮೆರಿಕದ ಪೌರತ್ವ ಮತ್ತು ಮಾಹಿತಿ ಸೇವೆಗಳು (uscis) ಈ ವರ್ಷದ ಮಾರ್ಚ್ ತಿಂಗಳಿಂದ ಮುಚ್ಚಲ್ಪಟ್ಟಿದೆ, ಇದು ದೇಶಕ್ಕೆ ವಲಸೆಗಾಗಿ ಅಸ್ತಿತ್ವದಲ್ಲಿರುವ ಅರ್ಜಿಗಳ ಪ್ರಕ್ರಿಯೆಯನ್ನು ಸಹ ಸ್ಥಗಿತಗೊಳಿಸಿದೆ.
ಅಮೆರಿಕದ ಟ್ರಂಪ್ ಆಡಳಿತದ ಈ ಹೊಸ ನಿಯಮಾವಳಿಯೂ ಅಮೆರಿಕದ ಉದ್ಯೋಗ ವಲಯದ ಮೇಲೆ ಕೋವಿಡ್-19 ದಾಳಿಯ ವ್ಯತಿರಿಕ್ತ ಪರಿಣಾಮವಾಗಿದೆ. ಫೆಬ್ರವರಿ ಮತ್ತು ಏಪ್ರಿಲ್ 2020 ರ ನಡುವೆ, ಯುನೈಟೆಡ್ ಸ್ಟೇಟ್ಸ್ ಅಮೆರಿಕದಲ್ಲಿ 20 ದಶಲಕ್ಷ(2 ಕೋಟಿ)ಕ್ಕೂ ಹೆಚ್ಚು ಅಮೇರಿಕನ್ ನಾಗರಿಕರು ಪ್ರಮುಖ ಕೈಗಾರಿಕೆಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದೀಗ, ಅಲ್ಲಿ ಉದ್ಯೋಗದಾತರು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಎಚ್ 1 ಬಿ ಮತ್ತು ಎಲ್ ವೀಸಾ ಹೊಂದಿರುವವರನ್ನು ಕೋರಿದ್ದಾರೆ. 17 ದಶಲಕ್ಷಕ್ಕೂ ಹೆಚ್ಚು ಅಮೆರಿಕನ್ ನಾಗರಿಕರು ಕೈಗಾರಿಕೆಗಳಲ್ಲಿ ಉದ್ಯೋಗ ಕಳೆದುಕೊಂಡರು, ಈಗ ವಿದೇಶದಿಂದ ಬಂದಿರುವ ಹೆಚ್ 2 ಬಿ ವಲಸೆರಹಿತ ವೀಸಾ ಹೊಂದಿರುವವರು ಭರ್ತಿ ಮಾಡಲು ಕಂಪನಿಗಳಲ್ಲಿ ಪ್ರಯತ್ನ ನಡೆಸಿವೆ.
ಈ ಕ್ರಮವನ್ನು ತೆಗೆದುಕೊಳ್ಳುವ ಮೂಲಕ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2020 ರ ಅವಧಿಯಲ್ಲಿ ಆಫ್ರಿಕನ್ ಅಮೆರಿಕನ್ನರು, ಕಾಲೇಜು ಪದವಿ ಇಲ್ಲದವರು, ಅಲ್ಪಸಂಖ್ಯಾತರು ಮತ್ತು ಅಂಗವಿಕಲರು ಸೇರಿದಂತೆ ಅಮೆರಿಕದ ನಾಗರಿಕರಿಗೆ ಸುಮಾರು 525,000 ಉದ್ಯೋಗಗಳನ್ನು "ರಕ್ಷಿಸುತ್ತಾರೆ" ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಅಮೆರಿಕ ಅಧ್ಯಕ್ಷರು ಸಾರ್ವಜನಿಕವಾಗಿ ಹೇಳಿದಂತೆ “ ಅಮೆರಿಕದ ಕಾರ್ಮಿಕರು ನಮ್ಮ ಆರ್ಥಿಕತೆಯ ಪ್ರತಿಯೊಂದು ವಲಯದ ಉದ್ಯೋಗಗಳಿಗಾಗಿ ವಿದೇಶಿ ಪ್ರಜೆಗಳ ವಿರುದ್ಧ ಸ್ಪರ್ಧಿಸುತ್ತಾರೆ, ತಾತ್ಕಾಲಿಕ ಕೆಲಸ ಮಾಡಲು ಯುನೈಟೆಡ್ ಸ್ಟೇಟ್ಸ್ ಅಮೆರಿಕ ಪ್ರವೇಶಿಸುವ ಲಕ್ಷಾಂತರ ವಿದೇಶಿಯರ ಅವರ ಸಂಗಾತಿಗಳು ಮತ್ತು ಮಕ್ಕಳೊಂದಿಗೆ ಬರುವವರೂ ಸಹ ಹಲವರು ಅಮೆರಿಕಾದ ಕಾರ್ಮಿಕರ ವಿರುದ್ಧವೂ ಸ್ಪರ್ಧಿಸುತ್ತಾರೆ ”.
ಈ ನಿಷೇಧದ ವಿನಾಯಿತಿಗಳು ಹೆಚ್ 2 ಬಿ ವೀಸಾಗಳನ್ನು ಹೊಂದಿರುವ ಆಹಾರ ಪೂರೈಕೆ ಸರಪಳಿ ಕಾರ್ಮಿಕರಿಗೆ ಅಥವಾ ಯುನೈಟೆಡ್ ಸ್ಟೇಟ್ಸ್ ಅಮೆರಿಕ "ರಾಷ್ಟ್ರೀಯ ಹಿತಾಸಕ್ತಿ" ಯಲ್ಲಿ ಅಗತ್ಯವಿರುವವರಿಗೆ ಅನ್ವಯಿಸುತ್ತದೆ. "ರಾಷ್ಟ್ರೀಯ ಹಿತಾಸಕ್ತಿ" ವಿನಾಯಿತಿಯ ಅಡಿಯಲ್ಲಿ ಐದು ವರ್ಗದ ವಿದೇಶಿಯರು ಬರುತ್ತಾರೆ. ರಕ್ಷಣಾ ಕ್ಷೇತ್ರದಲ್ಲಿ ಅಗತ್ಯವಿರುವವರು, ಕಾನೂನು ಜಾರಿ, ರಾಜತಾಂತ್ರಿಕತೆ ಅಥವಾ ರಾಷ್ಟ್ರೀಯ ಭದ್ರತೆ, ಕೋವಿಡ್ -19 ಅಗತ್ಯ ಆರೋಗ್ಯ ರಕ್ಷಣೆ ಸೇವೆ ಮತ್ತು ಯುನೈಟೆಡ್ ಸ್ಟೇಟ್ಸ್ ಅಮೆರಿಕದ ತಕ್ಷಣದ ಮತ್ತು ಮುಂದುವರಿದ ಆರ್ಥಿಕ ಚೇತರಿಕೆಗೆ ಅಗತ್ಯವೆಂದು ಪರಿಗಣಿಸಲಾಗಿರುವವರಿಗೆ ವಿನಾಯಿತಿ ಅನ್ವಯವಾಗಲಿದೆ. ಇನ್ನೂ, ರಾಜಕೀಯ ಪ್ರಭಾವ ಹೊಂದಿರುವ ಅಮೆರಿಕನ್ ಕಂಪೆನಿಗಳ ಕೊನೆಯ ವರ್ಗವು ಟ್ರಂಪ್ ಆಡಳಿತವನ್ನು ಮನವೊಲಿಸುವ ಮೂಲಕ 2020 ರ ಉಳಿದ ದಿನಗಳಲ್ಲಿ ಕಡಿಮೆ ಸಂಖ್ಯೆಯ ಎಚ್ 1 ಬಿ ಮತ್ತು ಎಲ್ ವೀಸಾ ಹೊಂದಿರುವವರು ಅಮೆರಿಕ ಪ್ರವೇಶಕ್ಕೆ ಅನುಮತಿಸಲು ಅವಕಾಶ ನೀಡುವ ಸಾಧ್ಯತೆ ಇದೆ.
ಅಮೆರಿಕದ ಈ ಹೊಸ ನಿಯಮಾವಳಿ ಪರಿಣಾಮ ಭಾರತದ ಮೇಲೆ ಎದ್ದು ಕಾಣುತ್ತಿದೆ. ಯುನೈಟೆಡ್ ಸ್ಟೇಟ್ಸ್ ಅಮೆರಿಕವು ಪ್ರತಿವರ್ಷ 85,000 ಎಚ್ 1 ಬಿ ವೀಸಾಗಳನ್ನು ನೀಡುತ್ತದೆ, ಅದರಲ್ಲಿ ಮುಕ್ಕಾಲು ಭಾಗವನ್ನು ಭಾರತೀಯ ಪ್ರಜೆಗಳಿಗೆ ನೀಡಲಾಗುತ್ತದೆ, ಮುಖ್ಯವಾಗಿ ತಂತ್ರಜ್ಞಾನ ಉದ್ಯಮದಲ್ಲಿ ಕೆಲಸ ಮಾಡಲು ಈ ವೀಸಾ ನೀಡಲಾಗುತ್ತಿತ್ತು. 2004 ಮತ್ತು 2012 ರ ನಡುವಿನ ಅವಧಿಯಲ್ಲಿ ಭಾರತೀಯ ಪ್ರಜೆಗಳಿಗೆ 500,000 ಹೆಚ್1ಬಿ ವೀಸಾಗಳನ್ನು ನೀಡಲಾಗಿದೆ ಎಂದು ದಾಖಲೆ ಹೇಳುತ್ತದೆ. ಅವರ ಕುಟುಂಬಗಳನ್ನು ಒಳಗೊಂಡಂತೆ, ಯುನೈಟೆಡ್ ಸ್ಟೇಟ್ಸ್ ಅಮೆರಿಕದ ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಹೆಚ್ಚು ಸಕ್ರಿಯವಾಗಿರುವ ಈ ವೀಸಾ ಹೊಂದಿರುವ 3 ಮಿಲಿಯನ್-ಪ್ರಬಲ ಭಾರತೀಯ ಅಮೆರಿಕನ್ ಸಮುದಾಯದಲ್ಲಿ ಸುಮಾರು 750,000 ರಷ್ಟು ಮಂದಿ 2004ರಿಂದ 2012ರವರೆಗೆ ತೆರಳಿದವರೇ ಆಗಿದ್ದಾರೆ.
ಹೆಚ್1ಬಿ ವೀಸಾಗಳಿಂದ ಲಾಭ ಪಡೆದ ಭಾರತೀಯ ತಂತ್ರಜ್ಞಾನ ಕಂಪನಿಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಇನ್ಫೋಸಿಸ್, ವಿಪ್ರೋ, ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್, ಮತ್ತು ಲಾರ್ಸೆನ್ ಮತ್ತು ಟೌಬ್ರೊ ಇನ್ಫೋಟೆಕ್ ಸೇರಿವೆ. ಆ ಮೂಲಕ, ಈ ಕಂಪನಿಗಳು 2017 ರವರೆಗೆ ಯುನೈಟೆಡ್ ಸ್ಟೇಟ್ಸ್ ಅಮೆರಿಕದಲ್ಲಿ 9 17.9 ಬಿಲಿಯನ್ ಹೂಡಿಕೆ ಮಾಡಿದ 100 ಭಾರತೀಯ ಕಂಪನಿಗಳ ಭಾಗವಾಗಿದ್ದು, ಅಮೆರಿಕದ ಎಲ್ಲಾ 50 ರಾಜ್ಯಗಳಲ್ಲಿ 113,000 ಉದ್ಯೋಗಗಳನ್ನು ಸೃಷ್ಟಿಸಿವೆ.
ಸರಕು ಮತ್ತು ಸೇವೆಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಅಮೆರಿಕವು ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. ಅಮೆರಿಕದ ಆರ್ಥಿಕತೆಯ ತಂತ್ರಜ್ಞಾನ, ಲೆಕ್ಕಪತ್ರ ನಿರ್ವಹಣೆ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಭಾರತದಿಂದ ಎಚ್ 1 ಬಿ ವೀಸಾಗಳನ್ನು ಹೊಂದಿರುವ ನುರಿತ ಕಾರ್ಮಿಕರ ಹರಿವಿನಲ್ಲಿ ಹೊಸ ನಿಷೇಧದಿಂದ ಹಠಾತ್ ಅಡ್ಡಿ ಉಂಟಾಗುತ್ತದೆ.
ಕೋವಿಡ್ -19 ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಹಿಂಜರಿತದಿಂದ ಚೇತರಿಸಿಕೊಳ್ಳಲು ಯುನೈಟೆಡ್ ಸ್ಟೇಟ್ಸ್ ಅಮೆರಿಕ ನಡೆಸುವ ಯಾವುದೇ ರಾಷ್ಟ್ರೀಯ ಪ್ರಯತ್ನದಲ್ಲಿ ಈ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸುತ್ತವೆ. ವಲಸೆರಹಿತ ವೀಸಾ ಹೊಂದಿರುವವರು ತಮ್ಮ ಸೇವೆಗಳನ್ನು ಯುನೈಟೆಡ್ ಸ್ಟೇಟ್ಸ್ ಆರ್ಥಿಕತೆಯಲ್ಲಿ ತಲುಪಿಸುವುದನ್ನು ನಿಷೇಧಿಸುವ ಅಮೆರಿಕದ ಕ್ರಮವು ಒಟ್ಟಾರೆ ಭಾರತ-ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಕಾರ್ಯತಂತ್ರದ ಸಹಭಾಗಿತ್ವದಲ್ಲಿ ಅತ್ಯಂತ ಪ್ರಮುಖ ಮತ್ತು ಪರಸ್ಪರ ಲಾಭದಾಯಕ ಕ್ಷೇತ್ರಗಳಲ್ಲಿ ಒಂದನ್ನು ಹಾಳು ಮಾಡುತ್ತದೆ.
ಲೇಖಕರು: ಅಶೋಕ್ ಮುಖರ್ಜಿ- ವಿಶ್ವಸಂಸ್ಥೆಯಲ್ಲಿ ಭಾರತದ ಮಾಜಿ ಖಾಯಂ ಪ್ರತಿನಿಧಿ, ವಾಷಿಂಗ್ಟನ್ ಡಿಸಿ ರಾಯಭಾರ ಕಚೇರಿಯ ಮಾಜಿ ರಾಯಭಾರಿ