ಹೈದರಾಬಾದ್: ಕೊರೊನಾ ವೈರಸ್ ಜಗತ್ತಿನಾದ್ಯಂತ ದೊಡ್ಡ ಪ್ರಮಾಣದಲ್ಲಿ ಹರಡುವುದು ಮುಂದುವರಿದಿದೆ. ಅದಕ್ಕೆ ಸೂಕ್ತ ಲಸಿಕೆಯನ್ನು ಅಭಿವೃದ್ಧಿಪಡಿಸಿ ಜಗತ್ತಿನಾದ್ಯಂತ ಬಳಕೆ ಪ್ರಾರಂಭಿಸಲು ಆದ್ಯತೆ ನೀಡುವುದೊಂದೇ ಈ ಸಾಂಕ್ರಾಮಿಕ ಪಿಡುಗನ್ನು ಕೊನೆಗಾಣಿಸುವ ಮಾರ್ಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
2019ರ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ತಹಬಂದಿಗೆ ತರಲು ಅದನ್ನು ಹತ್ತಿಕ್ಕುವ ಕ್ರಮವೊಂದಕ್ಕೇ ಹೆಚ್ಚಿನ ಒತ್ತು ನೀಡಲಾಗಿದೆ. ಅಂದರೆ ಪ್ರಕರಣ ಗುರುತಿಸುವಿಕೆ, ಸ್ವ ದಿಗ್ಬಂಧನ ಅಥವಾ ಗೃಹ ದಿಗ್ಬಂಧನ, ಸಂಪರ್ಕ ಮೂಲಗಳ ಪತ್ತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಧಾನಗಳನ್ನು ದೊಡ್ಡ ಪ್ರಮಾಣದಲ್ಲಿ ಅನುಸರಿಸಲಾಗುತ್ತಿದೆ.
ಸಾಂಕ್ರಾಮಿಕ ರೋಗಗಳಿಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳಿಗೆ ನೆರವು ನೀಡುವ ಎಪಿಡೆಮಿಕ್ ಪ್ರಿಪೇರ್ಡ್‌ನೆಸ್ ಇನೋವೇಶನ್ಸ್ (ಸಿಇಪಿಐ) ಸಹಯೋಗದಲ್ಲಿ ಫೆಬ್ರವರಿ 2020ರಲ್ಲಿ ಜಾಗತಿಕ ಸಮಾಲೋಚನೆಯೊಂದನ್ನು ಪ್ರಾಯೋಜಿಸಲಾಗಿತ್ತು. ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಅಭಿವೃದ್ಧಿಪಡಿಸುವ ಕ್ರಿಯಾಪಡೆಯ ಉಗಮಕ್ಕೆ ಕಾರಣವಾದ ಈ ಕ್ರಮಕ್ಕೆ ವಿಶ್ವ ಬ್ಯಾಂಕ್ ಸಹಭಾಗಿಯಾಗಿತ್ತು. ಇಡೀ ಜಗತ್ತಿಗೆ ಲಭ್ಯವಾಗುವಂತೆ ಲಸಿಕೆ ಉತ್ಪಾದಿಸುವುದು ಮತ್ತು ಅದಕ್ಕೆ ಹಣಕಾಸು ವ್ಯವಸ್ಥೆ ಮಾಡುವುದು ಹೇಗೆಂಬುದರ ಕುರಿತು ಈ ಕ್ರಿಯಾಪಡೆ ಈಗ ಕೆಲಸ ಮಾಡುತ್ತಿದೆ.