ನವದೆಹಲಿ:ಚೀನಾದಲ್ಲಿ ಮರಣ ಮೃದಂಗವನ್ನೇ ಬಾರಿಸಿರುವ ಕೊರೊನಾ ವೈರಸ್ ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದ್ದು, ಇದೀಗ ಭಾರತದಲ್ಲೂ ಇದರ ಪ್ರಕರಣ ಕಾಣಸಿಗುತ್ತಿವೆ.
ದೆಹಲಿ, ತೆಲಂಗಾಣದಲ್ಲಿ ಕೊರೊನಾ ಸೋಂಕು ಪತ್ತೆ... ಕೇಂದ್ರದಿಂದಲೇ ಮಾಹಿತಿ ರಿಲೀಸ್!
ಕೊರೊನಾ ವೈರಸ್ ಇದೀಗ ಭಾರತದ ವಿವಿಧ ನಗರಗಳಿಗೆ ಲಗ್ಗೆ ಹಾಕುತ್ತಿದ್ದು, ನವದೆಹಲಿ ಹಾಗೂ ತೆಲಂಗಾಣದಲ್ಲೂ ಇಬ್ಬರಿಗೆ ಈ ಸೋಂಕು ಕಾಣಿಸಿಕೊಂಡಿದೆ.
ವೈರಸ್ನಿಂದಾಗಿ ಪ್ರಪಂಚದಾದ್ಯಂತ ಈಗಾಗಲೇ 3 ಸಾವಿರ ಜನರು ಸಾವನ್ನಪ್ಪಿದ್ದು, 80 ಸಾವಿರಕ್ಕೂ ಅಧಿಕ ಮಂದಿ ಈ ವೈರಸ್ನಿಂದ ಬಳಲುತ್ತಿದ್ದಾರೆ. ಇದರ ಮಧ್ಯೆ ಹೊಸದಾಗಿ ಭಾರತದಲ್ಲಿ ಮತ್ತೆರೆಡು ಪ್ರಕರಣ ಕಂಡು ಬಂದಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಂಡಿದೆ.
ನವದೆಹಲಿಯಲ್ಲಿ ಒಂದು ಪ್ರಕರಣ ಹಾಗೂ ತೆಲಂಗಾಣದಲ್ಲಿ ಮತ್ತೊಂದು ಪ್ರಕರಣ ಕಾಣಿಸಿಕೊಂಡಿದ್ದು, ಇಟಲಿಯಿಂದ ದೆಹಲಿಗೆ ಆಗಮಿಸಿದ ವ್ಯಕ್ತಿ ಹಾಗೂ ದುಬೈನಿಂದ ತೆಲಂಗಾಣಕ್ಕೆ ಆಗಮಿಸಿದ ವ್ಯಕ್ತಿಯಲ್ಲಿ ಈ ಸೋಂಕು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಈಗಾಗಲೇ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ನಿಗಾ ವಹಿಸಲಾಗಿದೆ ಎಂದು ತಿಳಿದು ಬಂದಿದೆ.