ಹೈದರಾಬಾದ್: ಜಗತ್ತಿನಲ್ಲಿ ಕೋವಿಡ್-19 ನಿಂದ ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 60 ವರ್ಷ ಮೇಲ್ಪಟ್ಟವರು ಹಾಗೂ ಈ ಮೊದಲೇ ಉಸಿರಾಟದ ತೊಂದರೆ ಇರುವವರಿಗೆ ಕೋವಿಡ್ನಿಂದ ಅಪಾಯ ಜಾಸ್ತಿ ಎಂದು ಕೆಲ ಸಂಶೋಧನೆಗಳು ಹೇಳಿವೆ. ಹಾಗಂತ ವಯಸ್ಸಾದ ಎಲ್ಲರಿಗೂ ಕೋವಿಡ್ ಅಪಾಯ ಹೆಚ್ಚು ಎಂದು ಹೇಳಲಾಗದು. ಹಾಗೆಯೇ ಕಡಿಮೆ ವಯಸ್ಸಿನ ಎಲ್ಲರಿಗೂ ಅಪಾಯ ಕಡಿಮೆ ಎನ್ನಲಾಗದು.
ಪ್ರಸ್ತುತ ಕೋವಿಡ್-19 ಸೋಂಕಿಗೊಳಗಾದವರಲ್ಲಿ 20 ವರ್ಷ ಕೆಳಗಿನ ಶೇ.9 ರಷ್ಟು, 21 ರಿಂದ 40 ವಯೋಮಾನದ ಶೇ.42, 41 ರಿಂದ 60 ವಯೋಮಾನದ ಶೇ.33 ಹಾಗೂ 60 ವರ್ಷ ಮೇಲ್ಪಟ್ಟ ಶೇ.17 ರಷ್ಟು ಜನ ಇದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಲವ ಅಗರ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಸದ್ಯ ಕೋವಿಡ್-19 ನಿಂದ ಅತಿ ಹೆಚ್ಚು ಬಾಧಿತವಾಗಿರುವ ಅಮೆರಿಕದಲ್ಲಿ ವಾಸವಾಗಿರುವ ವೈದ್ಯರಾದ ಮಧು ಕೊರ್ರಪಾಟಿ ಈನಾಡು ದೊಂದಿಗೆ ಮಾತನಾಡಿ, ಪ್ರಸಕ್ತ ಇದೊಂದು ಅತಿ ಗಂಭೀರವಾದ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದ್ದು, ಕೊರೊನಾ ಸೋಂಕು ಎಲ್ಲ ವಯೋಮಾನದವರಿಗೂ ಹರಡುತ್ತಿದೆ. ಕೊರೊನಾ ಸೋಂಕಿರುವ ಬಹುತೇಕ ಜನರಲ್ಲಿ ಕಡಿಮೆ ಅಥವಾ ಮಧ್ಯಮ ಪ್ರಮಾಣದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಆದರೆ, 'ಬಹುತೇಕ' ಎಂದರೆ 'ಎಲ್ಲರೂ' ಎಂದರ್ಥವಲ್ಲ. ಕೊರೊನಾ ಯಾರಿಗೆ ಅತಿ ಹೆಚ್ಚು ಬಾಧಿಸುತ್ತದೆ ಎಂದು ಹೇಳುವ ಮುನ್ನ ಅನೇಕ ತಿಂಗಳು ಮಾಹಿತಿಗಾಗಿ ಕಾಯಬೇಕಾಗುತ್ತದೆ. ಆದರೆ ತುಂಬಾ ಆರಂಭಿಕ ಅಂಕಿ ಅಂಶಗಳ ಆಧಾರದಲ್ಲಿಯೇ ಅಂದಾಜು ಪ್ರಕಟಿಸಲಾಗುತ್ತಿದೆ ಎಂದು ಹೇಳಿದ್ದಾರೆ.
'ಕೊರೊನಾದಿಂದ ವಯೋವೃದ್ಧರು ಸಾಯುವ ಸಾಧ್ಯತೆಗಳು ಹೆಚ್ಚು ಎಂಬ ನಿರ್ಧಾರಕ್ಕೆ ಬರುವ ಮುನ್ನ ನಾವು ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ.' ಎನ್ನುತ್ತಾರೆ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿ ವಿಭಾಗದ ಮುಖ್ಯಸ್ಥ ಡಾ. ಮೈಕ್ ರಿಯಾನ್.
ಸ್ಪೇನ್ನಲ್ಲಿ ಕೊರೊನಾದಿಂದ ಸಾವಿಗೀಡಾದ ಮೂರನೇ ಒಂದರಷ್ಟು ರೋಗಿಗಳು 44 ವರ್ಷದೊಳಗಿನವರಾಗಿದ್ದಾರೆ. ಹಾಗೆಯೇ ಅಮೆರಿಕದಲ್ಲಿ 20 ರಿಂದ 44 ವಯೋಮಾನದ ಶೇ.29 ರಷ್ಟು ರೋಗಿಗಳು ಸಾವಿಗೀಡಾಗಿದ್ದಾರೆ. ಇನ್ನು ಚಿಕ್ಕಮಕ್ಕಳಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆಗಳನ್ನು ಅಂದಾಜಿಸುವುದು ಈಗಲೂ ಕಗ್ಗಂಟಾಗಿಯೇ ಉಳಿದಿದೆ.