ನವದೆಹಲಿ:ದೇಶವ್ಯಾಪಿ ಹೇರಲಾದ ಕೋವಿಡ್-19 ಪ್ರೇರಿತ ಲಾಕ್ಡೌನ್ ತೆರವಿಗೆ ಇನ್ನೂ ನಾಲ್ಕು ದಿನಗಳಿವೆ. ದಿಗ್ಬಂಧನದಲ್ಲಿ ಸಾಕಷ್ಟು ಸಡಿಲಿಕೆ ನೀಡುವ ಹೊಸ ಮಾರ್ಗಸೂಚಿಗಳನ್ನು ಶೀಘ್ರದಲ್ಲಿ ಪ್ರಕಟಿಸುವ ಸುಳಿವನ್ನ ಕೇಂದ್ರ ಗೃಹ ಸಚಿವಾಲಯ ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವಾಲಯದ ವಕ್ತಾರ, ಕೋವಿಡ್ 19 ಹೋರಾಟದ ಹೊಸ ಮಾರ್ಗಸೂಚಿಗಳು ಮೇ 4ರಿಂದ ಜಾರಿಗೆ ಬರಲಿದ್ದು, ಇದು ಅನೇಕ ಜಿಲ್ಲೆಗಳಿಗೆ ಸಾಕಷ್ಟು ಸಡಿಲಿಕೆಗಳನ್ನು ನೀಡಲಿದೆ. ಇದರ ಕುರಿತಾದ ವಿವರಗಳನ್ನು ಬರುವ ದಿನಗಳಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಗೃಹ ಸಚಿವಾಲಯ ಇಂದು ಲಾಕ್ಡೌನ್ ಪರಿಸ್ಥಿತಿಯ ಬಗ್ಗೆ ಸಮಗ್ರ ಪರಿಶೀಲನಾ ಸಭೆ ನಡೆಸಿತು. ಲಾಕ್ಡೌನ್ನಿಂದ ಅಗಾಧವಾದ ಲಾಭಗಳು ಮತ್ತು ಸುಧಾರಣೆ ಕಂಡುಬಂದಿವೆ. ಈ ಲಾಭಗಳನ್ನು ದೂರಮಾಡದಂತೆ ನೋಡಿಕೊಳ್ಳಲು, ಮೇ 3ರವರೆಗೆ ಲಾಕ್ಡೌನ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ.
ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು, ಯಾತ್ರಿಕರು ಮನೆಗೆ ತೆರಳಲು ಅನುಕೂಲ ಆಗುವಂತಹ ಹೊಸ ಮಾರ್ಗಸೂಚಿಗಳನ್ನು ಬುಧವಾರ ಗೃಹ ಸಚಿವಾಲಯ ಹೊರಡಿಸಿತ್ತು. ಇದಾದ ಕೆಲವು ಗಂಟೆಗಳಲ್ಲಿ ಸಡಿಲಿಕೆಯ ಸಿಹಿ ಸುದ್ದಿ ಹೊರ ಬಿದ್ದಿದೆ.