ನವದೆಹಲಿ:ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 67,151 ಕೋವಿಡ್ ಕೇಸ್ಗಳು ವರದಿಯಾಗಿದ್ದು, ದೇಶದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 32 ಲಕ್ಷ ಗಡಿ ದಾಟಿದೆ.
ಇನ್ನೊಂದೆಡೆ ಕಳೆದ ಒಂದು ದಿನದ ಅಂತರದಲ್ಲಿ 1,059 ಜನ ಮಾರಕ ಸೋಂಕಿನಿಂದಾಗಿ ಬಲಿಯಾಗಿದ್ದು, ಈವರೆಗೆ ದೇಶಾದ್ಯಂತ ಒಟ್ಟು 59,449 ಜನ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ ಒಟ್ಟಾರೆ 32,34,475 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈವರೆಗೆ ಜಾಗತಿಕವಾಗಿ ಭಾರತ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾದ ರಾಷ್ಟ್ರಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಅಮೆರಿಕ ಹಾಗೂ ಬ್ರೆಜಿಲ್ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ. ಸದ್ಯ ಭಾರತದಲ್ಲಿ 7,07,267 ಸಕ್ರಿಯ ಪ್ರಕರಣಗಳಿದ್ದು, ಇವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಡೆಯುತ್ತಿದೆ.
ದೇಶದಲ್ಲಿ ಗುಣಮುಖರ ಪ್ರಮಾಣ 76.30ಶೇ. ಕ್ಕೇರಿಕೆ
ದೇಶದಲ್ಲಿ ಒಟ್ಟು 32 ಲಕ್ಷ ಕೊರೊನಾ ಪ್ರಕರಣಗಳು ವರದಿಯಾಗಿದ್ದರೂ, ಈವರೆಗೆ 24,67,758 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ದೇಶದ ಗುಣಮುಖರ ಪ್ರಮಾಣ 76.30ಶೇ. ಕ್ಕೆ ಏರಿಕೆಯಾಗಿದೆ. ಸದ್ಯ ಕೇವಲ 21.87ರಷ್ಟು ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಡೆಯುತ್ತಿದೆ. ಉಳಿದಂತೆ ಶೇ 1.84ರಷ್ಟು ಸೋಂಕಿತರು ಸಾವನ್ನಪ್ಪಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 8,23,992 ಕೋವಿಡ್ ಟೆಸ್ಟ್ಗಳನ್ನು ನಡೆಸಲಾಗಿದ್ದು, ಈವರೆಗೆ ಒಟ್ಟು 3,76,51,512(3.76ಕೋಟಿ) ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ. ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಟೆಸ್ಟ್ಗಳನ್ನು ನಡೆಸಿದ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. 7 ಕೋಟಿಗೂ ಹೆಚ್ಚು ಪರೀಕ್ಷೆಗಳನ್ನು ನಡೆಸಿರುವ ಅಮೆರಿಕ ಮೊದಲ ಸ್ಥಾನದಲ್ಲಿದೆ.