ನವದೆಹಲಿ:ಕೋವಿಡ್ 19 ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಸಾವಿನ ಸಂಖ್ಯೆ 718ಕ್ಕೆ ಏರಿದ್ದು, ದೇಶದಲ್ಲಿ 23,077 ಪ್ರಕರಣಗಳು ಇದುವರೆಗೂ ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಒಟ್ಟು ಪ್ರಕರಣಗಳ ಸಂಖ್ಯೆ 17,610 ಆಗಿದ್ದು, 4,748 ಜನರನ್ನು ಈಗಾಗಲೇ ಗುಣಪಡಿಸಲಾಗಿದೆ. ಇನ್ನು 23,502 ಪ್ರಕರಣಗಳು ಪಾಸಿಟಿವ್ ಎಂದು ದೃಢಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. ದೇಶದಲ್ಲಿ ವರದಿಯಾದ ಒಟ್ಟು 23,077 ಪ್ರಕರಣಗಳಲ್ಲಿ 77 ವಿದೇಶಿ ಪ್ರಜೆಗಳು ಕೂಡ ಸೇರಿದ್ದಾರೆ.
ನಿನ್ನೆ ಸಂಜೆಯಿಂದ ಈವರೆಗೆ ದೇಶದಲ್ಲಿ 32 ಸಾವುಗಳು ವರದಿಯಾಗಿವೆ. ಅದರಲ್ಲಿ 14 ಸಾವುಗಳು ಮಹಾರಾಷ್ಟ್ರದಿಂದ, ಒಂಬತ್ತು ಗುಜರಾತ್‌ನಿಂದ, ಮೂರು ಉತ್ತರಪ್ರದೇಶದಿಂದ ಮತ್ತು ದೆಹಲಿ, ಮಧ್ಯಪ್ರದೇಶ ಮತ್ತು ತಮಿಳುನಾಡಿನಿಂದ ತಲಾ ಎರಡು ಸಾವುಗಳು ಸಂಭವಿಸಿವೆ ಎಂದು ಸಚಿವಾಲಯ ತಿಳಿಸಿದೆ.
718 ಸಾವುಗಳಲ್ಲಿ 283 ಸಾವು ಮಹಾರಾಷ್ಟ್ರವೊಂದರಲ್ಲೇ ಸಂಭವಿಸಿವೆ. ಈ ಹಿನ್ನೆಲೆ ಸಾವಿನ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್ 112 ಎರಡನೇ ಸ್ಥಾನ. ಉಳಿದಂತೆ ಮಧ್ಯಪ್ರದೇಶ 83, ದೆಹಲಿ 50, ರಾಜಸ್ಥಾನ ಮತ್ತು ಆಂಧ್ರಪ್ರದೇಶದಲ್ಲಿ ತಲಾ 27 ಸಾವು ಸಂಭವಿಸಿವೆ.
ಉತ್ತರ ಪ್ರದೇಶ ಮತ್ತು ತೆಲಂಗಾಣದಲ್ಲಿ ತಲಾ 24 ಸಾವುಗಳು ಸಂಭವಿಸಿದ್ದು, ತಮಿಳುನಾಡಿನಲ್ಲಿ 20 ಮತ್ತು ಕರ್ನಾಟಕದಲ್ಲಿ 17 ಸಾವುಗಳು ಈವರೆಗೆ ಸಂಭವಿಸಿವೆ. ಪಂಜಾಬ್‌ನಲ್ಲಿ 16, ಪಶ್ಚಿಮ ಬಂಗಾಳದಲ್ಲಿ 15, ಜಮ್ಮು ಮತ್ತು ಕಾಶ್ಮೀರದಲ್ಲಿ ಐದು, ಕೇರಳ, ಜಾರ್ಖಂಡ್ ಮತ್ತು ಹರಿಯಾಣದಲ್ಲಿ ತಲಾ ಮೂರು ಜನರು ಸಾವಿಗೀಡಾಗಿದ್ದಾರೆ. ಬಿಹಾರದಲ್ಲಿ ಎರಡು, ಮೇಘಾಲಯ, ಹಿಮಾಚಲ ಪ್ರದೇಶ, ಒಡಿಶಾ ಮತ್ತು ಅಸ್ಸೋಂನಲ್ಲಿ ತಲಾ ಒಂದು ಸಾವು ಸಂಭವಿಸಿದೆ ಎಂದು ಸಚಿವಾಲಯದ ನವೀಕರಿಸಿದ ಅಂಕಿ ಅಂಶಗಳು ತಿಳಿಸಿವೆ.