ನವದೆಹಲಿ:ಮಹಾಮಾರಿ ಕೋವಿಡ್ -19 ಸಾಂಕ್ರಾಮಿಕ ರೋಗವು ದೇಶದಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿದೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ.
ಮಾರ್ಗಸೂಚಿಗಳ ಅನುಷ್ಠಾನದ ಕೊರತೆಯಿಂದ ಮೂಗುದಾರವಿಲ್ಲದ ಸಾಂಕ್ರಾಮಿಕ ರೋಗವು ಎಗ್ಗಿಲ್ಲದೇ ಪಸರಿಸಿದೆ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿಫಲತೆಯನ್ನು ಎತ್ತು ತೋರಿಸಿದೆ.
ಕೋವಿಡ್ -19 ವಿಶ್ವದ ವಿರುದ್ಧ ಸಮರಕ್ಕೆ ನಿಂತಂತಿದೆ ಎಂದು ಹೇಳಿದ ಸುಪ್ರೀಂಕೋರ್ಟ್, ಹಿಂದೆಂದೂ ಕಂಡರಿಯದ ಸಾಂಕ್ರಾಮಿಕ ರೋಗದಿಂದ ವಿಶ್ವದ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಈ ಬಾಧೆಯಿಂದ ಬಳಲುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದೆ.
ವಿಶ್ವದ ಕೆಲವಡೆ ಎರಡೇ ಸುತ್ತಿನ ಕೋವಿಡ್ ಅಲೆ ಕಂಡು ಬರುತ್ತಿರುವುದರಿಂದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು ಈ ಬಗ್ಗೆ ಇಂದು ಎಚ್ಚರಿಕೆಯ ಸಂದೇಶ ನೀಡಿದೆ.
ದೀರ್ಘಾವಧಿ ಕರ್ಫ್ಯೂ ಹಾಗೂ ಲಾಕ್ಡೌನ್ ಹೇರಿಕೆ ತಂದಿದ್ದರೆ ಇದರ ಬಗ್ಗೆ ಜನರು ಎಚ್ಚರದಿಂದ ಇರುತ್ತಿದ್ದರು. ಜನರು ತಮ್ಮ ತಮ್ಮ ಹೊಟ್ಟೆಪಾಡು ಬಗ್ಗೆ ಯೋಚನೆ ಮಾಡುತ್ತಿದ್ದರು. ಮಾರ್ಗಸೂಚಿಗಳ ಅನುಷ್ಠಾನದ ಕೊರತೆಯಿಂದ ಇಡೀ ಮಾನವ ಕುಲಕ್ಕೆ ಕಂಟಕ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ವೈದ್ಯರು ಮತ್ತು ದಾದಿಯರು ಸೇರಿದಂತೆ ಕೊರಿನಾ ವಾರಿಯರ್ಸ್ಗಳು ಈಗಾಗಲೇ ಕಳೆದ ಎಂಟು ತಿಂಗಳಿಂದ ಕೋವಿಡ್ ವಿರುದ್ಧ ಹೋರಾಡುತ್ತಲೇ ಇದ್ದಾರೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಅವರು ಸಾಕಷ್ಟು ದಣಿದಿದ್ದಾರೆ. ಹಾಗಾಗಿ ಅವರಿಗೆ ಈಗ ಮಧ್ಯಂತರ ವಿಶ್ರಾಂತಿ ನೀಡಲು ಕೆಲವು ಕಾರ್ಯವಿಧಾನಗಳು ಬೇಕಾಗಬಹುದು ಎಂದು ನ್ಯಾಯಮೂರ್ತಿಗಳಾದ ಆರ್ ಎಸ್ ರೆಡ್ಡಿ ಮತ್ತು ಎಂ ಆರ್ ಷಾ ಅವನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.
ಈ ಸಾಂಕ್ರಾಮಿಕ ಸಮಯದಲ್ಲಿ ಪ್ರತಿ ರಾಜ್ಯವು ಜಾಗರೂಕತೆಯಿಂದ ವರ್ತಿಸಬೇಕು ಅಲ್ಲದೇ ಕೇಂದ್ರದೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಬೇಕು ಎಂದೂ ಪೀಠ ತಿಳಿಸಿದೆ. ಇದೇ ವೇಳೆ ನಾಗರಿಕರು ಆರೋಗ್ಯದತ್ತ ಗಮನ ಕೊಡಬೇಕೆಂದು ನ್ಯಾಯಪೀಠ ಹೇಳಿದೆ.