ಕೆಲವು ಸಾಂಕ್ರಾಮಿಕ ರೋಗಗಳ ಸಮಯದಲ್ಲಿ ಸಾಮಾಜಿಕ-ಆರ್ಥಿಕ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚಾಗಿ ಬಾಧಿತರಾಗಿದ್ದರು. ಪುರುಷರು ಸಾಮಾಜಿಕ-ಆರ್ಥಿಕ ಬಿಕ್ಕಟ್ಟಿನಿಂದ ಸುಲಭವಾಗಿ ಹೊರಬರಬಹುದು. ಆದರೆ ಹೆಚ್ಚಿನ ಮಹಿಳೆಯರಿಗೆ ಇದು ಕಷ್ಟಸಾಧ್ಯ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ, ಅನೇಕ ಸಾಂಸ್ಕೃತಿಕ ಮತ್ತು ಸಾಮಾಜಿಕ-ಆರ್ಥಿಕ ಅಂಶಗಳಿಂದಾಗಿ, ಕೋವಿಡ್ -19 ಕಾರಣದಿಂದಾಗಿ ಮಹಿಳೆಯರು ಹೆಚ್ಚು ತೊಂದರೆ ಅನುಭವಿಸುವಂತಾಗಿದೆ. ಅಂಕಿಅಂಶಗಳು ಇನ್ನೂ ಹೊರಹೊಮ್ಮುತ್ತಿರುವಾಗ, ಲಿಟರೇಚರ್ ಸ್ಕ್ಯಾನ್ (a scan of the literature) ಮಹಿಳೆಯರಲ್ಲಿ ಸಾವಿನ ಪ್ರಮಾಣ (1.7%) ಪುರುಷರಿಗಿಂತ (2.8%) ಕಡಿಮೆಯಾಗಿದೆ ಎಂದು ಸೂಚಿಸುತ್ತದೆ.
ವಲಸಿಗರ ಸಂಕಷ್ಟಗಳನ್ನು ಗುರುತಿಸಲಾಗಿದೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮಹಿಳೆಯರ ಮೇಲೆ ಕೋವಿಡ್ ಪ್ರಭಾವವು ಕಡಿಮೆ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ.
ಮಹಿಳೆಯರ ಉದ್ಯೋಗದ ಮೇಲೆ ಪರಿಣಾಮ :
ಕಳೆದ 3-4 ತಿಂಗಳುಗಳಲ್ಲಿ ನಿರುದ್ಯೋಗ 30.3 ಮಿಲಿಯನ್‌ಗೆ ಏರಿದೆ. ಕೊರೊನಾ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ನಿರುದ್ಯೋಗವು ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ಆರಂಭಿಕ ಮಾಹಿತಿಯು ಸೂಚಿಸುತ್ತದೆ.
ಪ್ರಪಂಚದಾದ್ಯಂತ ಸುಮಾರು 60 ಪ್ರತಿಶತದಷ್ಟು ಮಹಿಳೆಯರು ಅನೌಪಚಾರಿಕ ಆರ್ಥಿಕತೆಯಲ್ಲಿ ಕೆಲಸ ಮಾಡುತ್ತಾರೆ. ಕಡಿಮೆ ಸಂಪಾದಿಸುತ್ತಾರೆ. ಕಡಿಮೆ ಉಳಿತಾಯ ಮಾಡುತ್ತಾರೆ ಮತ್ತು ಬಡತನಕ್ಕೆ ಸಿಲುಕುವ ಹೆಚ್ಚಿನ ಅಪಾಯದಲ್ಲಿದ್ದಾರೆ. ಫೆಬ್ರವರಿ ಮತ್ತು ಮಾರ್ಚ್ 2020 ರ ನಡುವಿನ ವೇತನದಾರರ ಮಾಹಿತಿಯ ಆಧಾರದ ಮೇಲೆ ಇನ್‌ಸ್ಟಿಟ್ಯೂಟ್ ಫಾರ್ ವುಮೆನ್ಸ್ ಪಾಲಿಸಿ ರಿಸರ್ಚ್ (ಐಡಬ್ಲ್ಯೂಪಿಆರ್) ವರದಿಯ ಪ್ರಕಾರ, ಮಹಿಳೆಯರು ಸುಮಾರು 60% ರಷ್ಟು ಉದ್ಯೋಗ ನಷ್ಟವನ್ನು ಭರಿಸಿದ್ದಾರೆ. ಹಾಗೆಯೇ ಚಿಲ್ಲರೆ ವ್ಯಾಪಾರ, ವೃತ್ತಿಪರ ಮತ್ತು ವ್ಯಾಪಾರ ಸೇವೆಗಳು ಮತ್ತು ಬಾಳಿಕೆ ಬರುವ ಸರಕುಗಳ ಉತ್ಪಾದನೆ ವಲಯದಲ್ಲಿ ಮಹಿಳೆಯರು ಹೆಚ್ಚು ಉದ್ಯೋಗ ಕಳೆದುಕೊಂಡಿದ್ದಾರೆ.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ) ಏಪ್ರಿಲ್ ತಿಂಗಳೊಂದರಲ್ಲೇ ಮಹಿಳೆಯರ ಉದ್ಯೋಗದಲ್ಲಿ 39% ಕುಸಿತವನ್ನು ವರದಿ ಮಾಡಿದೆ. ಲಾಕ್ ಡೌನ್ ಸಮಯದಲ್ಲಿ ಭಾರತದಲ್ಲಿ ಕೆಲಸ ಮಾಡುವ ಪ್ರತಿ ಹತ್ತು ಮಹಿಳೆಯರಲ್ಲಿ ನಾಲ್ವರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಇದು ಸೂಚಿಸುತ್ತದೆ. ದತ್ತಾಂಶವು ಗ್ರಾಮೀಣ ಮಹಿಳೆಯರಿಗೆ ಹೆಚ್ಚು ಹೊಡೆತ ಬಿದ್ದಿದೆ ಎಂದು ತೋರಿಸುತ್ತದೆ.