ನವದೆಹಲಿ: ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದೆ. ಈ ವೈರಸ್‌ನಿಂದ ರಕ್ಷಣೆ ಮಾಡಿಕೊಳ್ಳಲು ದೇಶಾದ್ಯಂತ ಕೋಟ್ಯಂತರ ಜನರು ಮಾಸ್ಕ್ಗಳ ಮೊರೆ ಹೋಗ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಹೆಚ್ಚು ಜನರು ಎನ್-95 ಮಾಸ್ಕ್ ಧರಿಸುವುದು ಕಂಡು ಬರುತ್ತಿದೆ. ದೇಹದ ಹೊರಗಡೆ ಹಾಗೂ ಒಳಗಡೆಯಿಂದ ಬರುವ ಗಾಳಿಯನ್ನು ನಿಯಂತ್ರಣ ಮಾಡುವ ಕವಾಟ ಹೊಂದಿರುವ ಎನ್-95 ಮಾಸ್ಕ್ ಹಾಕಿಕೊಳ್ಳುವುದರಿಂದ ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾ ನಿರ್ದೇಶಕ ರಾಜೀವ್ ಗರ್ಗ್, ಎಲ್ಲಾ ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಈ ಮಾಸ್ಕ್ ಹಾಕಿಕೊಳ್ಳುವುದರಿಂದ ವೈರಾಣು ಒಳ ಬರುವುದು ಹಾಗೂ ಹೊರ ಹೋಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದು, N-95 ಮಾಸ್ಕ್ ಬಳಕೆ ತಡೆಯಲು ಸೂಕ್ತ ಮಾರ್ಗಸೂಚಿ ಜಾರಿಗೊಳಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದೆ.
ಈ ಬಗ್ಗೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ್ದು, ಮನೆಯಲ್ಲಿ ತಯಾರಿಸಿರುವ ಮಾಸ್ಕ್ ಬಳಕೆ ಮಾಡಲು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ಮನೆಯಲ್ಲಿ ನಿರ್ಮಾಣ ಮಾಡುವ ಮಾಸ್ಕ್ ಹಾಕಿಕೊಳ್ಳುವುದು ಸೂಕ್ತವಾಗಿದ್ದು, ಪ್ರತಿದಿನ ತೊಳೆದು ಹಾಕಿಕೊಳ್ಳುವುದು ಉತ್ತಮ ಎಂದಿರುವ ಇಲಾಖೆ, ಹತ್ತಿ ಬಟ್ಟೆ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬಹುದು ಎಂದಿದೆ. ಇದರ ಜೊತೆಗೆ ಎಲ್ಲರೂ ಪ್ರತ್ಯೇಕವಾಗಿ ಮಾಸ್ಕ್ ಬಳಕೆ ಮಾಡುವುದು ಅತಿ ಅವಶ್ಯವಾಗಿದೆ ಎಂದು ಅದು ತಿಳಿಸಿದೆ.