ಪಣಜಿ: ಉತ್ತರ ಕೊರಿಯಾದ ರೋಗಿ ನಂ.31 ಏನು ಮಾಡಿದ್ದ ಎಂಬುದು ಎಲ್ಲರಿಗೂ ಗೊತ್ತಿರಬಹುದು. ಆ ದೇಶದಲ್ಲಿ ಕೊರೊನಾದಿಂದ ಸೋಂಕಿತನಾದ 31ನೇ ವ್ಯಕ್ತಿಯೊಬ್ಬ ಸಾವಿರಾರು ಜನರಿಗೆ ಸೋಂಕು ತಗುಲಿಸಿದ್ದ. ಈಗ ಅಂಥದೇ ಘಟನೆಯೊಂದು ಗೋವಾದಲ್ಲಿ ನಡೆದಿದೆ.
20 ಜನರನ್ನು ಭೇಟಿಯಾದ ಕೋವಿಡ್ ಸೋಂಕಿತ: ಆತಂಕವೋ ಆತಂಕ - ಪಣಜಿ
ವಿದೇಶದಿಂದ ಗೋವಾಗೆ ಮರಳಿದ ಮೂವರು ಕೋವಿಡ್ ಪಾಸಿಟಿವ್ ವ್ಯಕ್ತಿಗಳು ಕನಿಷ್ಠ 42 ಜನರನ್ನು ಭೇಟಿ ಮಾಡಿರುವುದು ಗೋವಾ ಸರ್ಕಾರದ ನಿದ್ದೆಗೆಡಿಸಿದೆ. ತಮ್ಮ ವಿದೇಶ ಪ್ರಯಾಣದ ವಿವರಗಳನ್ನು ಬಚ್ಚಿಟ್ಟ ಇವರು ಸೋಂಕಿತರಾಗಿದ್ದರೂ ಹಲವಾರು ಜನರನ್ನು ಭೇಟಿ ಮಾಡಿದ್ದಾರೆ.
![20 ಜನರನ್ನು ಭೇಟಿಯಾದ ಕೋವಿಡ್ ಸೋಂಕಿತ: ಆತಂಕವೋ ಆತಂಕ covid-19-goa](https://etvbharatimages.akamaized.net/etvbharat/prod-images/768-512-6571402-861-6571402-1585395808267.jpg)
ಅಮೆರಿಕದಿಂದ ಮರಳಿದ್ದ 55 ವರ್ಷದ ವ್ಯಕ್ತಿಯೊಬ್ಬರನ್ನು ಪರೀಕ್ಷಿಸಿ ಪಣಜಿ ಬಳಿಯ ಐಸೊಲೇಷನ್ ಕೇಂದ್ರದಿಂದ ಮಾ.25 ರಂದು ಬಿಡುಗಡೆ ಮಾಡಲಾಗಿತ್ತು. ಆದರೆ ಯಾವುದೋ ಸಂಶಯದಿಂದ ಮತ್ತೆ ಆತನನ್ನು ಕರೆಸಿ ಪರೀಕ್ಷೆ ಮಾಡಿದಾಗ ಕೋವಿಡ್-19 ಪಾಸಿಟಿವ್ ಎಂಬುದು ದೃಢಪಟ್ಟಿದೆ. ಆದರೆ ಇಷ್ಟರಲ್ಲಿ ಆಗಬಾರದ್ದು ಆಗಿ ಹೋಗಿತ್ತು.
ಆತನನ್ನು ಮರಳಿ ಕರೆತರುವಷ್ಟರಲ್ಲಿ ಆತ ಭೇಟಿ ಮಾಡಿದ್ದು ಬರೋಬ್ಬರಿ 20 ಜನರನ್ನು. ಈ ವ್ಯಕ್ತಿ ಮಾತ್ರವಲ್ಲದೇ ವಿದೇಶದಿಂದ ಗೋವಾಕ್ಕೆ ಮರಳಿದ್ದ ಇನ್ನಿಬ್ಬರು ಸಹ ತಮ್ಮ ಪ್ರಯಾಣ ವಿವರಗಳನ್ನು ಮುಚ್ಚಿಟ್ಟಿದ್ದ ವಿವರ ಬಹಿರಂಗವಾಗಿದೆ. ಈ ಇಬ್ಬರೂ ಸಹ ಕೋವಿಡ್ ಪಾಸಿಟಿವ್ ಆಗಿದ್ದು, ಒಟ್ಟಾರೆ ಈ ಮೂವರು 42 ಜನರನ್ನು ಭೇಟಿ ಮಾಡಿರುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ತಿಳಿಸಿದ್ದಾರೆ. ಈಗ ಈ ತ್ರಿವಳಿ ಸೋಂಕಿತರ ಕೃತ್ಯದಿಂದ ಮಹಾಮಾರಿ ಗೋವಾದ ಹಲವಾರು ಜನರಿಗೆ ಹರಡುವ ಭೀತಿ ಆವರಿಸಿದೆ.