ಹೈದರಾಬಾದ್:ಕೋವಿಡ್ ತುರ್ತುಸ್ಥಿತಿಯು ಯುವಜನರ ಶಿಕ್ಷಣ ಮತ್ತು ತರಬೇತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಶಾಲಾ, ಕಾಲೇಜುಗಳನ್ನು ಮುಚ್ಚಿರುವುದಕ್ಕೆ ಶೇ.70 ಕ್ಕಿಂತ ಹೆಚ್ಚು ಯುವಕರು ಬೇಸರವನ್ನು ವ್ಯಕ್ತಪಡಿಸಿದ್ದಾರೆ ಎಂದು ಅಂತರ್ರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ)ಯ ವರದಿ ಹೇಳುತ್ತದೆ.
ವರದಿಯ ಪ್ರಕಾರ, ಕೋವಿಡ್-19 ಉದ್ಯೋಗ, ಶಿಕ್ಷಣ, ಹಕ್ಕುಗಳು ಮತ್ತು ಮಾನಸಿಕವಾಗಿ ಯುವಕರ ಮೇಲೆ ಪರಿಣಾಮ ಬೀರಿದ್ದು, ಮನೆಯಲ್ಲಿ ಕುಳಿತು ಆನ್‌ಲೈನ್ ಪಾಠದ ಮೂಲಕ ಶೇ.65 ರಷ್ಟು ಯುವಕರು ಕಡಿಮೆ ಕಲಿತಿದ್ದಾರೆ. ಕೆಲವರು ಆಲೋಚಿಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡರೆ, ಇನ್ನೂ ಕೆಲವರು ಪರೀಕ್ಷೆಯನ್ನು ಮುಂದೂಡಬಹುದೆಂದು ನಂಬಿದ್ದರು. ಶೇ 9 ಮಂದಿ ತಾವು ಸ್ವಲ್ಪ ದಿನಗಳ ನಂತರ ಶಾಲೆಗೆ ಹೋಗಬಹುದು ಎಂದು ನಂಬಿದ್ದರು. ಇನ್ನು ಕಡಿಮೆ ಆದಾಯದ ದೇಶಗಳಲ್ಲಿನ ಯುವಕರಿಗೆ, ಇಂಟರ್ನೆಟ್ ಸೌಲಭ್ಯದ ಕೊರತೆ, ಸಲಕರಣೆಗಳ ಕೊರತೆ ಮತ್ತು ಕೆಲವೊಮ್ಮೆ ಮನೆಯಲ್ಲಿ ಸ್ಥಳಾವಕಾಶದ ಕೊರತೆ ಇರುವ ಪರಿಸ್ಥಿತಿಯೂ ಇದೆ.
ಈ ಸಾಂಕ್ರಾಮಿಕ ರೋಗ ಯುವಜನರಿಗೆ ಅನೇಕ ಆಘಾತಗಳನ್ನುಂಟು ಮಾಡುತ್ತಿದೆ. ಇದು ಅವರ ಉದ್ಯೋಗ ಮತ್ತು ಉದ್ಯೋಗದ ಭವಿಷ್ಯವನ್ನು ನಾಶಪಡಿಸುವುದಲ್ಲದೆ, ಅವರ ಶಿಕ್ಷಣ ಹಾಗೂ ತರಬೇತಿಗೂ ಅಡ್ಡಿಪಡಿಸುತ್ತಿದೆ. ಅಲ್ಲದೇ ಅವರ ಮಾನಸಿಕ ಸ್ವಾಸ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಐಎಲ್ಒ ಮಹಾನಿರ್ದೇಶಕ ಗೈ ರೈಡರ್ ಹೇಳುತ್ತಾರೆ.
ಇದು ದೇಶಗಳ ನಡುವಿನ ದೊಡ್ಡ ‘ಡಿಜಿಟಲ್ ವಿಭಜನೆಯನ್ನು’ ಎತ್ತಿ ತೋರಿಸುತ್ತದೆ. ಹೆಚ್ಚಿನ ಆದಾಯದ ದೇಶಗಳಲ್ಲಿ ಶೇ.65 ರಷ್ಟು ಯುವಕರಿಗೆ ಆನ್‌ಲೈನ್ ಮೂಲಕ ತರಗತಿಗಳನ್ನು ನೀಡಲಾಗುತ್ತಿದೆ. ಕಡಿಮೆ ಆದಾಯದ ದೇಶಗಳಲ್ಲಿ ಕೇವಲ 18 ಪ್ರತಿಶತದಷ್ಟು ಜನರು ಮಾತ್ರ ಆನ್‌ಲೈನ್ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಕೆಲವು ಸನ್ನಿವೇಶಗಳಲ್ಲಿ ಯುವಕರು ತಮ್ಮ ಬುದ್ಧಿ ಶಕ್ತಿಯನ್ನು ಸಮಾಜದ ವಿರುದ್ಧದ ಹೋರಾಟದಲ್ಲಿ ಮಾತನಾಡಲು ಬಳಸುತ್ತಿದ್ದಾರೆ. ಸಮೀಕ್ಷೆಯ ಪ್ರಕಾರ, ಸಾಂಕ್ರಾಮಿಕ ಸಮಯದಲ್ಲಿ ನಾಲ್ಕರಲ್ಲಿ ಒಬ್ಬರು ಕೆಲವು ಸ್ವಯಂಸೇವಕ ಕೆಲಸಗಳನ್ನು ಮಾಡಿದ್ದಾರೆ.
ಕೋವಿಡ್-19 ಬಿಕ್ಕಟ್ಟಿಗೆ ಹೆಚ್ಚು ಸಮಗ್ರ ಪ್ರತಿಕ್ರಿಯೆಯನ್ನು ನೀಡುವಲ್ಲಿ ಯುವಕರ ಧ್ವನಿಗಳು ಕೇಳಿಬರುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಯುವಜನರ ಅಗತ್ಯತೆಗಳು ಮತ್ತು ಅವರ ಆಲೋಚನೆಗೆ ತಕ್ಕ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತಂದು, ಅದರಲ್ಲಿ ಅವರು ಭಾಗವಹಿಸುವಂತೆ ಮಾಡುವುದು ಉತ್ತಮ ಎಂದು ವರದಿ ಹೇಳುತ್ತದೆ.