ನವದೆಹಲಿ: ಪ್ರಸಿದ್ಧ ಆರೋಗ್ಯ ತಜ್ಞ ಆಶಿಶ್ ಝಾ ಹಾಗೂ ಸ್ವೀಡನ್‌ನ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಜೋಹಾನ್ ಗೀಸೆಕೆ ಅವರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಡಿಯೋ ಕಾನ್ಫರೆನ್ಸ್ ಸಂವಾದ ನಡೆಸಲಿದ್ದು, ಇಂದು ಬೆಳಗ್ಗೆ 9 ಗಂಟೆಗೆ ಇದರ ನೇರ ಪ್ರಸಾರವಾಗಲಿದೆ.
ಈ ಸಂವಾದದಲ್ಲಿ ಕೊರೊನಾ ವೈರಸ್‌ನ ಸ್ವರೂಪ, ಪರೀಕ್ಷಾ ಕಾರ್ಯತಂತ್ರಗಳು, ಕೋವಿಡ್ ನಂತರದ ಜಗತ್ತಿನ ಚಿತ್ರಣ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ.
ಕೋವಿಡ್-19 ಬಿಕ್ಕಟ್ಟು ಕುರಿತು ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ಆರೋಗ್ಯ ಮತ್ತು ಇತರ ಕ್ಷೇತ್ರಗಳ ತಜ್ಞರೊಂದಿಗೆ ರಾಗಾ ನಡೆಸುತ್ತಿರುವ ಮೂರನೇ ಸರಣಿ ಸಂವಾದ ಇದಾಗಿದೆ. ಇತ್ತೀಚೆಗೆ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರೊಂದಿಗೆ ಸಂಭಾಷಣೆ ನಡೆಸಿದ್ದರು.
ಕೊರೊನಾ ನಿಯಂತ್ರಿಸುವಲ್ಲಿ ಲಾಕ್ಡೌನ್ ವಿಫಲವಾಗಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ ಇಂದು ಮಹಾಮಾರಿ ತಂದಿಟ್ಟ ಪರಿಸ್ಥಿತಿ ಕುರಿತು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ತಜ್ಞರೊಂದಿಗೆ ಚರ್ಚಿಸಲಿದ್ದಾರೆ.