ಕರ್ನಾಟಕ

karnataka

ETV Bharat / bharat

ವಿಶೇಷ ಲೇಖನ... ಕೋವಿಡ್ 19 ಸವಾಲು ಮತ್ತು ತಬ್ಲಿಘಿ ಜಮಾತ್: ವಸ್ತುನಿಷ್ಠ ವಿಮರ್ಶೆಯ ಅಗತ್ಯ

ಕೋವಿಡ್ ವೈರಸ್ ಹೆಸರಿನಲ್ಲಿ ದೇಶದ ಸಾಮರಸ್ಯವನ್ನು ಕದಡುವ ಎಲ್ಲ ಪ್ರಯತ್ನಗಳನ್ನೂ ಹೊಸಕಿಹಾಕಬೇಕಿದೆ.

covid-19-challenge-and-tablighi-jamaat-need-for-objective-focus
ಕೋವಿಡ್ 19 ಸವಾಲು ಮತ್ತು ತಬ್ಲಿಘಿ ಜಮಾತ್

By

Published : Apr 6, 2020, 10:41 AM IST

ಈ ಲೇಖನವನ್ನು ಬರೆಯುವ ಹೊತ್ತಿಗೆ, ಅಂದರೆ ಏಪ್ರಿಲ್ 5 ರಂದು ಭಾರತದಲ್ಲಿನ ಕೋವಿಡ್ 19 ಸೋಂಕಿತರ ಸಂಖ್ಯೆ 3500 ರ ಗಡಿ ದಾಟಿದೆ. ವೈರಸ್ ಹರಡುವ ಪ್ರಮಾಣ ಹೆಚ್ಚುತ್ತಿದ್ದಂತೆಯೇ ಒದು 4000 ಗಡಿ ದಾಟುವ ಎಲ್ಲ ಲಕ್ಷಣಗಳೂ ಇವೆ.

ಒಂದು ಆತಂಕಕಾರಿ ಸಂಗತಿ ಎಂದರೆ ದೇಶದಲ್ಲಿ ಕಂಡುಬಂದ ಒಟ್ಟು ಸೋಂಕಿತರ ಪ್ರಕರಣಗಳಲ್ಲಿ ಶೇ. 30 ಕ್ಕೂ ಹೆಚ್ಚು ಜನರು ಮಾರ್ಚ್​​ನಲ್ಲಿ ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್​​ಗೆ ಸಂಬಂಧಿಸಿದವರಾಗಿದ್ದಾರೆ. ನಿಜಾಮುದ್ದೀನ್​​ನಲ್ಲಿ ನಡೆದ ಈ ವಾರ್ಷಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಹಾಜರಾಗಿದ್ದವರು ದೇಶದ ವಿವಿಧ ಭಾಗಗಳಿಗೆ ತೆರಳಿದ್ದಾರೆ. ಸದ್ಯ ಭಾರತದಲ್ಲಿ ಕಂಡುಬರುವ ಕೋವಿಡ್ ಪ್ರಕರಣಗಳ ಪೈಕಿ ತಬ್ಲಿಘಿ ಜಮಾತ್​​ ಸಭೆಗೆ ಸಂಬಂಧಿಸಿದ್ದೇ ಆಗಿದೆ.

ಅತಿ ಹೆಚ್ಚು ಬಾಧಿಸಿದ ರಾಜ್ಯಗಳೆಂದರೆ ತಮಿಳುನಾಡು, ದೆಹಲಿ, ಆಂಧ್ರ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಕರ್ನಾಟಕ, ಅಂಡಮಾನ್ ಮತ್ತು ನಿಕೋಬಾರ್, ಉತ್ತರಾಖಂಡ, ಹರ್ಯಾಣ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಕೇರಳ, ಅರುಣಾಚಲ ಪ್ರದೇಶ ಮತ್ತು ಜಾರ್ಖಂಡ್​ ಆಗಿವೆ. ಆರೋಗ್ಯ ಅಧಿಕಾರಿಗಳ ಪ್ರಕಾರ ಈ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ತಬ್ಲಿಗಿ ಜಮಾತ್ ಸದಸ್ಯರು ತಮ್ಮ ಗುಣಲಕ್ಷಣಗಳು, ಇತ್ತೀಚಿನ ಪ್ರವಾಸ ಇತಿಹಾಸವನ್ನು ಮುಚ್ಚಿಡುತ್ತಿರುವುದರಿಂದ ಪ್ರಕರಣಗಳು ಅಷ್ಟು ಪ್ರಮಾಣದಲ್ಲಿ ಬಹಿರಂಗಗೊಳ್ಳತ್ತಿಲ್ಲ.

ಇದೇ ಸಂದರ್ಭದಲ್ಲಿ, ತಬ್ಲಿಗಿ ಸಮುದಾಯದ ವಿರುದ್ಧ ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶವೂ ವ್ಯಕ್ತವಾಗುತ್ತಿದೆ. ಇದು ಮುಸ್ಲಿಂ ವಿರೋಧದ ಭಾವವನ್ನೂ ಹುಟ್ಟು ಹಾಕಿದೆ. ಅತ್ಯಂತ ಸೂಕ್ಷ್ಮ ಸಾಮಾಜಿಕ ಧಾರ್ಮಿಕ ಸನ್ನಿವೇಶ ಭಾರತದಲ್ಲಿದ್ದು, ಸದ್ಯ ಕೋವಿಡ್ ಧಾರ್ಮಿಕ ಭಾವನೆಗಳನ್ನೂ ಬಡಿದೆಬ್ಬಿಸುವಂತಾಗಿದೆ. ಸಾಮಾಜಿಕ ಮಾಧ್ಯಮ ಮತ್ತು ರಾಜಕೀಯ ವಲಯದಲ್ಲಿ ಇದಕ್ಕೆ ಧಾರ್ಮಿಕ ಬಣ್ಣ ಬಳಿಯಲಾಗಿದ್ದು, ಆರೋಗ್ಯ ತುರ್ತು ಪರಿಸ್ಥಿತಿಯಲ್ಲೂ ಇದನ್ನು ಬಿಜೆಪಿ ಮತ್ತು ಆರ್​​​ಎಸ್​​ಎಸ್​​​​​ ತಮ್ಮ ಕೋಮು ಸಂಘರ್ಷದ ದಾಹವನ್ನು ತೀರಿಸಿಕೊಳ್ಳಲು ಬಳಸುತ್ತಿವೆ. ಸಾಮಾಜಿಕ ಮಾಧ್ಯಮದಲ್ಲಂತೂ ಈ ಕುರಿತ ಸುಳ್ಳು ಸುದ್ದಿಗಳು ಮತ್ತು ದ್ವೇಷದ ಸಂದೇಶಗಳು ವ್ಯಾಪಕವಾಗಿ ಹರಡುತ್ತಿವೆ.

ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ತನ್ನ ಪಕ್ಷದ ಮುಖಂಡರಿಗೆ, ಈ ಸನ್ನಿವೇಶಕ್ಕೆ ಕೋಮು ಬಣ್ಣ ನೀಡುವ ಅಥವಾ ಯಾವುದೇ ಸಮಾಜ ಒಡೆಯುವ ಅಥವಾ ವಿಭಜನೆಗೆ ಕಾರಣವಾಗುವ ಹೇಳಿಕೆಗಳನ್ನು ನೀಡಬಾರದು ಎಂದು ಸೂಚಿಸಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಭೆಯೊಂದರಲ್ಲಿ ಬಿಜೆಪಿ ನಾಯಕರು “ದೇಶವನ್ನು ನಾವು ಮುನ್ನಡೆಸುತ್ತಿರುವುದರಿಂದ ನಮ್ಮ ಮೇಲೆ ಗಂಭೀರ ಜವಾಬ್ದಾರಿ ಇದೆ. ಈ ವೈರಸ್ ಇಡೀ ಜಗತ್ತಿನಲ್ಲಿ ಎಲ್ಲರನ್ನೂ ಆತಂಕಕ್ಕೆ ದೂಡಿದೆ. ಪ್ರಚೋದನಕಾರಿಯಾಗುವಂಥ ಯಾವುದೇ ಹೇಳಿಕೆ ಅಥವಾ ಟೀಕೆಗಳನ್ನು ಯಾರೂ ಮಾಡಬಾರದು” ಎಂದು ಸೂಚನೆ ನೀಡಿರುವುದಾಗಿ ತಿಳಿಸಲಾಗಿದೆ.

ಅದರಲ್ಲೂ ವಿಶೇಷವಾಗಿ ತಬ್ಲಿಘಿ ಜಮಾತ್ ನಾಯಕರ ವಿರುದ್ಧ ಯಾವುದೇ ಹೇಳಿಕೆ ನೀಡಬಾರದು ಮತ್ತು ಅವರ ವಿರುದ್ಧ ಅವಹೇಳನಕಾರಿ ಟೀಕೆಗಳನ್ನೂ ಮಾಡಬಾರದು ಎಂದು ಬಿಜೆಪಿ ನಾಯಕರು ಸೂಚಿಸಿದ್ದಾರೆ. ತಬ್ಲಿಘಿ ವಿಚಾರ ಪ್ರಸ್ತಾಪಕ್ಕೆ ಬಂದಾಗ ಈ ಸೂಚನೆ ನೀಡಲಾಗಿದೆ. ಇದನ್ನು ಯಾರೂ ಕೋಮು ವಿಚಾರವನ್ನಾಗಿ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಕೇವಲ ಅಲ್ಪಸಂಖ್ಯಾತ ಸಮುದಾಯದ ನಾಯಕರು ಮಾತ್ರ ಬಯಸಿದರೆ ಹೇಳಿಕೆ ನೀಡಬಹುದು. ವೈರಸ್ ವಿರುದ್ಧದ ನಮ್ಮ ಹೋರಾಟದಲ್ಲಿ ನಾವು ಒಟ್ಟಾಗಿರಬೇಕು.”

ಮಾರ್ಚ್​​ನಲ್ಲಿ ಕೋವಿಡ್ ಸಂಬಂಧಿ ಸೂಚನೆಗಳನ್ನು ತಬ್ಲಿಘಿ ಜಮಾತ್ ಮುಖಂಡರು ಉಲ್ಲಂಘಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಈ ಕಾರ್ಯಕ್ರಮ ಒಂದು ಅಸಂಬದ್ಧ ಅಥವಾ ಧಾರ್ಮಿಕ ವಿಪರೀತ ಆಚರಣೆಯೇ ಆಗಿರಬಹುದು. ಇದರ ಉದ್ದೇಶ ಏನು ಎಂಬುದನ್ನು ವಸ್ತುನಿಷ್ಠ ಮತ್ತು ವಾಸ್ತವ ಆಧರಿತ ತನಿಖೆಯಿಂದ ತಿಳಿದುಕೊಳ್ಳಬೇಕಿದೆ.ತಬ್ಲಿಘಿ ಜಮಾತ್​​ಗೆ ಇರುವ ಹಿನ್ನೆಲೆ ಮತ್ತು ಇಸ್ಲಾಂ ಮೂಲಭೂತವಾದ, ಜಿಹಾದ್ ಹಾಗೂ ಉಗ್ರಕೃತ್ಯದ ಜೊತೆಗೆ ಇದು ಹೊಂದಿರುವ ಸಂಬಂಧದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ತುಂಬಾ ವೇಗವಾಗಿ ನಡೆಯಬೇಕಿದೆ.

ನಿಜಾಮುದ್ದೀನ್ ಘಟನೆ ಮತ್ತು ಕೋವಿಡ್ ವೈರಸ್ ಒಂದಕ್ಕೊಂದು ಸಂಬಂಧ ಹೊಂದುತ್ತಿದ್ದಂತೆಯೇ, ದೃಶ್ಯ ಮಾಧ್ಯಮಗಳು ಈ ಕುರಿತ ವರದಿಯಲ್ಲಿ ಅತೀವ ತಾರತಮ್ಯವನ್ನು ತೋರುತ್ತಿವೆ. ವ್ಯಾಪಕವಾಗಿ ಸುಳ್ಳು ಸುದ್ದಿಗಳು ಹಬ್ಬಲು ಶುರುವಾಗಿವೆ ಮತ್ತು ಶಹೀನ್​ಬಾಗ್​​ನಲ್ಲಿ ಸಿಎಎ ವಿರೋಧಿ ಹೋರಾಟ ಮತ್ತು ನಿಜಾಮುದ್ದೀನ್​​​ನಲ್ಲಿ ತಬ್ಲಿಘಿ ಜಮಾತ್​​ನ ಚಟುವಟಿಕೆಗಳ ಮಧ್ಯೆ ಸಂಬಂಧವನ್ನೂ ಕಲ್ಪಿಸಲಾಗಿದೆ.

ಇತರ ಪ್ರಕರಣಗಳಲ್ಲಿ ಸರ್ಕಾರ ಮಾಡಿದಂತೆಯೇ, ಈ ವಿಚಾರದಲ್ಲೂ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡು ಹತ್ತಿಕ್ಕಬಹುದಾಗಿತ್ತು. ಆದರೆ ಸರ್ಕಾರ ಇದಕ್ಕೆ ಕಿವಿಗೊಟ್ಟಿಲ್ಲ. ಈ ನಿಟ್ಟಿನಲ್ಲಿ ನಡ್ಡಾ ಮಧ್ಯಪ್ರವೇಶವನ್ನು ಸ್ವಾಗತಿಸಬೇಕಾಗಿದೆ ಮತ್ತು ಬಿಜೆಪಿ ನಾಯಕರು ಮತ್ತು ಸೋಷಿಯಲ್ ಮೀಡಿಯಾದಲ್ಲಿನ ಜನರು ಈ ಸಲಹೆಗೆ ಬದ್ಧವಾಗಿರುತ್ತಾರೆ ಎಂದು ನಿರೀಕ್ಷಿಸಲಾಗಿದೆ ಮತ್ತು ವೈರಸ್ ಮತ್ತು ಧಾರ್ಮಿಕ ಭಾವನೆಗಳ ಕುರಿತು ಪ್ರಚೋದನಕಾರಿ ಟೀಕೆಗಳನ್ನು ಮಾಡುವುದಿಲ್ಲ ಎಂದು ನಿರೀಕ್ಷಿಸಲಾಗಿದೆ.

ಸಮಾಜದಲ್ಲಿ ಒಡಕು ಮೂಡಿಸದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಮಾಧ್ಯಮಗಳಿಗೆ ಹಲವು ರಾಜ್ಯಗಳು ಸ್ಪಷ್ಟ ಸೂಚನೆಗಳನ್ನು ನೀಡಿವೆ. ಈ ನಿಟ್ಟಿನಲ್ಲಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ಮೆಚ್ಚಬೇಕಿದೆ. ನಕಲಿ ವೀಡಿಯೋಗಳ ವಿರುದ್ಧ ಅವರು ಕಟ್ಟುನಿಟ್ಟಾದ ಎಚ್ಚರಿಕೆಯನ್ನು ನೀಡಿದ್ದಾರೆ. ಫೇಸ್​​ಬುಕ್​​ನಲ್ಲಿ (ಏಪ್ರಿಲ್ 4) ರಂದು ಬಿಡುಗಡೆ ಮಾಡಿದ ಸಂದೇಶದಲ್ಲಿ, ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದಿದ್ದಾರೆ.

ತಬ್ಲಿಘಿ ಜಮಾತ್​​ನಲ್ಲಿ ಭಾಗವಹಿಸಿ ರಾಜ್ಯಕ್ಕೆ ವಾಪಸ್ಸಾದ ಎಲ್ಲರನ್ನೂ ಪತ್ತೆ ಮಾಡಲಾಗಿದೆ ಮತ್ತು ಪ್ರತ್ಯೇಕಿಸಲಾಗಿದೆ ಎಂದು ದೃಢೀಕರಿಸಿರುವ ಸಿಎಂ “ಕೊರೊನಾವೈರಸ್ ರೀತಿಯಲ್ಲೇ ಇನ್ನೊಂದು ವೈರಸ್ ಕೂಡ ಸಮಾಜದ ಸಹಿಷ್ಣುತೆಯನ್ನು ಕದಡುತ್ತಿವೆ. ಸುಳ್ಳು ಸುದ್ದಿ ಮತ್ತು ಕೋಮು ದ್ವೇಷದ ಟೀಕೆಗಳು ಈ ಕೆಲಸ ಮಾಡುತ್ತಿವೆ. ಈ ವಿಪತ್ತಿನಿಂದ ಮಹಾರಾಷ್ಟ್ರವನ್ನು ನಾವು ಉಳಿಸುತ್ತೇವೆ. ಆದರೆ, ನೋಟುಗಳು ಅಥವಾ ಸಾಮಗ್ರಿಗಳಿಗೆ ಎಂಜಲು ಅಥವಾ ದಹನಕಾರಕಗಳನ್ನು ಹಚ್ಚಲಾಗುತ್ತಿದೆ ಎಂದು ಸುಳ್ಳು ಸುದ್ದಿ ಅಥವಾ ವಿಡಿಯೋಗಳನ್ನು ಹರಿಬಿಡುತ್ತಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಅಂಥವರನ್ನು ಸುಮ್ಮನೆ ಬಿಡಲಾಗದು. ಇದನ್ನು ತಮಾಷೆಗೂ ಮಾಡಬೇಡಿ.”

ಇದೊಂದು ಉತ್ತಮ ನಡೆ. ಇತರ ರಾಜ್ಯಗಳೂ ಇದನ್ನು ಅನುಸರಿಸಬಹುದು. 21 ದಿನಗಳ ನಂತರ ಲಾಕ್ಡೌನ್ ನಿಂದ ದೇಶ ಹೊರಬಂದಾಗ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆ ಸಹಜವಾಗಿಯೇ ನಡೆಯಬೇಕು. ಕೋವಿಡ್ ವೈರಸ್ ಹೆಸರಿನಲ್ಲಿ ದೇಶದ ಸಾಮರಸ್ಯವನ್ನು ಕದಡುವ ಎಲ್ಲ ಪ್ರಯತ್ನಗಳನ್ನೂ ಹೊಸಕಿಹಾಕಬೇಕಿದೆ.

ಸಿ. ಉದಯ ಭಾಸ್ಕರ್

ನಿರ್ದೇಶಕರು,

ನೀತಿ ಅಧ್ಯಯನಗಳ ಸಮಾಜ

ಜೆ-1825, ಎಲ್ಜಿಎಫ್, ಚಿತ್ತರಂಜನ್ ಪಾರ್ಕ್, ನವದೆಹಲಿ

ABOUT THE AUTHOR

...view details