ಕರ್ನಾಟಕ

karnataka

ETV Bharat / bharat

ದೇಶದ ಅತಿ ದೊಡ್ಡ ಮೃಗಾಲಯದಲ್ಲಿ ಆದಾಯ ಕೊರತೆ: 'ಪ್ರಾಣಿ ದತ್ತಿ'ಗೆ ಮನವಿ - ಪ್ರಾಣಿಗಳ ದತ್ತು

ದೇಶದ ಅತಿ ದೊಡ್ಡ ಮೃಗಾಲಯಗಳಲ್ಲಿ ಒಂದಾದ ತಿರುಪತಿಯ ಶ್ರೀವೆಂಕಟೇಶ್ವರ ಮೃಗಾಲಯದಲ್ಲಿ ಪ್ರಾಣಿ-ಪಕ್ಷಿಗಳಿಗೆ ಆಹಾರ ನೀಡಲು ಆದಾಯವಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾಣಿ-ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವಂತೆ ಮೃಗಾಲಯದ ಸಿಬ್ಬಂದಿ ಜನರಲ್ಲಿ ಮನವಿ ಮಾಡಿದ್ದಾರೆ.

ದೇಶದ ಅತೀ ದೊಡ್ಡ ಮೃಗಾಲಯವಾದ ತಿರುಪತಿಯ ಶ್ರೀವೆಂಕಟೇಶ್ವರ ಪಾರ್ಕ್​
ದೇಶದ ಅತೀ ದೊಡ್ಡ ಮೃಗಾಲಯವಾದ ತಿರುಪತಿಯ ಶ್ರೀವೆಂಕಟೇಶ್ವರ ಪಾರ್ಕ್​

By

Published : Sep 18, 2020, 2:39 PM IST

ತಿರುಪತಿ(ಆಂಧ್ರಪ್ರದೇಶ): ದೇಶದ ಅತಿ ದೊಡ್ಡ ಮೃಗಾಲಯಗಳಲ್ಲಿ ಒಂದಾದ ತಿರುಪತಿಯ ಶ್ರೀವೆಂಕಟೇಶ್ವರ ಮೃಗಾಲಯವು ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟಿನಿಂದ ತತ್ತರಿಸಿದೆ. ಕೊರೊನಾ ಲಾಕ್​ಡೌನ್​ ಬಳಿಕ ಜನರು ಮೃಗಾಲಯಕ್ಕೆ ಆಗಮಿಸುತ್ತಿಲ್ಲ. ಸುಮಾರು 6 ತಿಂಗಳಿನಿಂದ ಪ್ರಾಣಿಗಳನ್ನು ಸಾಕಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಣಿ-ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವಂತೆ ಮೃಗಾಲಯದ ಸಿಬ್ಬಂದಿ ಜನರಲ್ಲಿ ಮನವಿ ಮಾಡಿದ್ದಾರೆ.

ದೇಶದ ಅತಿ ದೊಡ್ಡ ಮೃಗಾಲಯವಾದ ತಿರುಪತಿಯ ಶ್ರೀವೆಂಕಟೇಶ್ವರ ಪಾರ್ಕ್​

"ಸಾಕಷ್ಟು ಪ್ರಮಾಣದಲ್ಲಿ ಪ್ರಾಣಿಗಳಿಗೆ ಆಹಾರ ನೀಡಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೆ, ಹಸಿವಿನಿಂದ ಪ್ರಾಣಿಗಳು ವಿಚಿತ್ರವಾಗಿ ಕೂಗುತ್ತಿವೆ. ಕೊರೊನಾ ಬಂದ ಬಳಿಕ ಉದ್ಯಾನವನವು ತನ್ನ ನಿಯಮಿತ ಆದಾಯವನ್ನು ಕಳೆದುಕೊಂಡಿದೆ. ಸದ್ಯ ನಮ್ಮಲ್ಲಿರುವ ಹಣದಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಮೃಗಾಲಯದ ವ್ಯವಸ್ಥಾಪಕರು ಈಗ ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಪ್ರತಿದಿನ ಸರಾಸರಿ 2000-3000 ಜನರು ಮೃಗಾಲಯ ಉದ್ಯಾನವನಕ್ಕೆ ಭೇಟಿ ನೀಡುತ್ತಿದ್ದರು. ಈ ಮೃಗಾಲಯವು ಪ್ರತಿವರ್ಷ ಸುಮಾರು 6 ಕೋಟಿ ರೂ. ಆದಾಯ ಗಳಿಸುತ್ತಿದ್ದು, ಕಳೆದ ಆರು ತಿಂಗಳಿನಿಂದ ಆದಾಯವಿಲ್ಲದೆ ನಷ್ಟದಲ್ಲಿದೆ" ಎಂದು ಇಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ.

ಸಮಸ್ಯೆಯನ್ನು ಹೋಗಲಾಡಿಸಲು, ಮೃಗಾಲಯದ ಅಧಿಕಾರಿಗಳು ಜನರಿಗೆ ಹಣವನ್ನು ದಾನ ಮಾಡುವಂತೆ ಮತ್ತು ತಮ್ಮ ಆಯ್ಕೆಯ ಪ್ರಾಣಿ-ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಮೃಗಾಲಯದಲ್ಲಿ ವೈವಿಧ್ಯಮಯ ಪ್ರಾಣಿಗಳು ಮತ್ತು ಪಕ್ಷಿಗಳಿವೆ. ಇದರಲ್ಲಿ 86 ಬಿಳಿ ಹುಲಿಗಳು ಮತ್ತು ಜಾಗ್ವಾರ್, ಹಲವಾರು ದೇಶಿಯ-ವಿದೇಶಿ ಪಕ್ಷಿಗಳು ಸೇರಿವೆ. ಎಸ್‌ವಿ ಮೃಗಾಲಯವು ಒಟ್ಟು 1147 ಪ್ರಾಣಿಗಳು ಮತ್ತು ಪಕ್ಷಿಗಳನ್ನು ಹೊಂದಿದೆ.

ಪ್ರಾಣಿಗಳು-ಪಕ್ಷಿಗಳನ್ನು ದತ್ತು ಪಡೆಯಲು ಅಥವಾ ದೇಣಿಗೆ ನೀಡಲು ಇಚ್ಛಿಸುವವರು, ಮೃಗಾಲಯದಲ್ಲಿರುವ ಪ್ರಾಣಿ-ಪಕ್ಷಿಗಳನ್ನು ಆಯ್ಕೆ ಮಾಡಿ ಹೆಸರು ಮತ್ತು ವಿಳಾಸವನ್ನು ನೋಂದಾಯಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಕೋರಿದ್ದಾರೆ. ಆಸಕ್ತರು 9440810066 ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

ABOUT THE AUTHOR

...view details