ಕೆವಾಡಿಯಾ (ಗುಜರಾತ್):ನಿನ್ನೆ ಹಾಗೂ ಇಂದು ಎರಡು ದಿನಗಳ ಗುಜರಾತ್ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ.
ಏಕತಾ ಪ್ರತಿಮೆಗೆ ನಮನ:
ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಏಕತಾ ದಿನ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗುಜರಾತ್ನ ಕೆವಾಡಿಯಾದಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ರ ಏಕತಾ ಪ್ರತಿಮೆಗೆ ಮೊದಲು ಮೋದಿ ನಮಿಸಿದರು. ಬಳಿಕ ಅಲ್ಲಿ ನಡೆದ ಏಕತಾ ಪರೇಡ್ನಲ್ಲಿ ಭಾಗವಹಿಸಿದ ಮೋದಿ ಪೊಲೀಸ್ ಸಿಬ್ಬಂದಿಯಿಂದ ಗೌರವ ಸ್ವೀಕರಿಸಿದರು.
ಏಕತಾ ಪರೇಡ್ನಲ್ಲಿ ಭಾಗವಹಿಸಿದ ಮೋದಿ ರಾಷ್ಟ್ರೀಯ ಏಕತಾ ದಿನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, "ಇಂದು ವಿಶ್ವದ ಎಲ್ಲಾ ದೇಶಗಳು ಭಯೋತ್ಪಾದನೆ ವಿರುದ್ಧ ಒಗ್ಗೂಡಬೇಕಿದೆ. ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಯಾರಿಗೂ ಕೂಡ ಪ್ರಯೋಜನವಿಲ್ಲ. ಭಾರತ ಹಿಂದಿನಿಂದಲೂ ಭಯೋತ್ಪಾದನೆ ವಿರುದ್ಧ ಹೋರಾಡುತ್ತಾ ಬಂದಿದೆ. ದೇಶವು ಏಕತೆಯ ಹೊಸ ಆಯಾಮಗಳನ್ನು ಸ್ಥಾಪಿಸುತ್ತಿದೆ. ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕೆ 130 ಕೋಟಿ ಭಾರತೀಯರು ಒಟ್ಟಾಗಿ ಕೈಜೋಡಿಸಿದ್ದಾರೆ, ಕೊರೊನಾ ವಾರಿಯರ್ಗಳಿಗೆ ಗೌರವಿಸಿದ್ದಾರೆ" ಎಂದರು.
"ಪುಲ್ವಾಮಾ ಭಯೋತ್ಪಾದಕ ದಾಳಿ ನಡೆಸಿರುವ ಸತ್ಯವನ್ನು ಪಾಕಿಸ್ತಾನ ಸಂಸ್ತತೇ ಒಪ್ಪಿಕೊಂಡಿದೆ. ದಾಳಿಯಲ್ಲಿ ಹುತಾತ್ಮರಾದ ಭಾರತದ ಧೈರ್ಯಶಾಲಿ ಸೈನಿಕರ ಸಾವಿಗೆ ಇಡೀ ರಾಷ್ಟ್ರವೇ ಶೋಕಿಸುತ್ತಿದ್ದಾಗ, ಕೆಲವರು ಲಾಭಕ್ಕಾಗಿ ಕೊಳಕು ರಾಜಕೀಯದಲ್ಲಿ ತೊಡಗಿದ್ದರು. ಇನ್ನು 370 ವಿಧಿ ರದ್ದತಿ ಬಳಿಕ ಕಾಶ್ಮೀರ ಅಭಿವೃದ್ಧಿಯತ್ತ ಸಾಗಿದೆ ಎಂದು ಇದೇ ವೇಳೆ ಮೋದಿ ಹೇಳಿದರು.
ಆನಂತರ ನಾಗರೀಕ ಸೇವೆಯ ಪ್ರೊಬೇಷನರಿ ಅಧಿಕಾರಿಗಳನ್ನುದ್ದೇಶಿಸಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಮುಂದಿನ 25 ವರ್ಷಗಳಲ್ಲಿ ನಿಮ್ಮ ಮೇಲೆ ದೊಡ್ಡ ದೊಡ್ಡ ಜವಾಬ್ದಾರಿಗಳಿವೆ. ಮುಂದಿನ ಎರಡು ದಶಕಗಳಲ್ಲಿ ದೇಶವು ತನ್ನ 100ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದೆ. ಈ ಸಂದರ್ಭದಲ್ಲಿ ನಾಗರಿಕ ಸೇವೆಗಳ ಪ್ರೊಬೆಷನರ್‌ಗಳು ಭಾರತದ ಐಕ್ಯತೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಸಂವಿಧಾನದ ಆಶಯಗಳನ್ನು ಉಳಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸೀಪ್ಲೇನ್ ಉದ್ಘಾಟನೆ:
ಇದಾದ ಬಳಿಕ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ದೇಶದ ಮೊಟ್ಟ ಮೊದಲ ಸೀಪ್ಲೇನ್ ಸೇವೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಕೆವಾಡಿಯಾದಿಂದ ಸಬರಮತಿಗೆ ಅದೇ ವಿಮಾನದಲ್ಲಿ ಪ್ರಯಾಣಿಸಿದರು. 15 ಆಸನ ಹೊಂದಿರುವ ಸೀಪ್ಲೇನ್, ಕೆವಾಡಿಯಾದಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಏಕತಾ ಪ್ರತಿಮೆಯಿಂದ ಅಹಮದಾಬಾದ್ನ ಸಬರಮತಿವರೆಗೆ ಹಾರಾಟ ನಡೆಸಲಿದೆ. ನೀರು, ನೆಲದ ಮೇಲಿಂದ ಹಾರುವ ಸಾಮರ್ಥ್ಯವುಳ್ಳ ವಿಮಾನ ಇದಾಗಿದ್ದು, ಒಬ್ಬ ಪ್ರಯಾಣಿಕನಿಗೆ ಒಂದು ಕಡೆಯ ಪ್ರಯಾಣಕ್ಕೆ 1,500 ರೂ. ಟಿಕೆಟ್ ದರ ನಿಗದಿಯಾಗಿದೆ
ಸೀಪ್ಲೇನ್ ಸೇವೆ ಉದ್ಘಾಟಿಸಿ ವಿಮಾನದಲ್ಲಿ ಹಾರಾಟ ನಡೆಸಿದ ಪಿಎಂ ನಿನ್ನೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ ಬಳಿಯಿರುವ ಹೊಸದಾಗಿ ನಿರ್ಮಾಣವಾಗಿರುವ ಪ್ರವಾಸಿ ಸ್ಥಳವಾದ 'ಆರೋಗ್ಯ ವನ'ವನ್ನು ಉದ್ಘಾಟಿಸಿದರು. ಸುಮಾರು 17 ಎಕರೆ ಇರುವ ಈ ಪ್ರವಾಸಿ ಸ್ಥಳದಲ್ಲಿ 380 ಜಾತಿಯ ಐದು ಲಕ್ಷ ಮರಗಳಿವೆ. ಇನ್ನು ಏಕ್ತಾ ಮಾಲ್, ಮಕ್ಕಳ ನ್ಯೂಟ್ರಿಷನ್ ಪಾರ್ಕ್, ಜಂಗಲ್ ಸಫಾರಿ, ಜುವಾಲಜಿಕಲ್ ಪಾರ್ಕ್ಗೆ ಚಾಲನೆ ನೀಡಿದ್ದರು.