ನವದೆಹಲಿ:ಪೌರತ್ವ (ತಿದ್ದುಪಡಿ) ಕಾನೂನನ್ನು 'ಸಾಂವಿಧಾನಿಕ' ಎಂದು ಘೋಷಿಸಬೇಕು ಎಂಬ ಅರ್ಜಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, 'ದೇಶವು ನಿರ್ಣಾಯಕ ಕಾಲಘಟ್ಟದಲ್ಲಿ ಸಾಗುತ್ತಿದೆ', ಹಾಗಾಗಿ ಇಂತಹ ಅರ್ಜಿಗಳು ಯಾವುದೇ ರೀತಿಯಲ್ಲೂ 'ಸಹಾಯ ಮಾಡುವುದಿಲ್ಲ' ಎಂದಿದ್ದಾರೆ. ಅಲ್ಲದೇ ಈ ಅರ್ಜಿಗಳ ತುರ್ತು ವಿಚಾರಣೆಯನ್ನು ನಿರಾಕರಿಸಿದ ಸುಪ್ರೀಂಕೋರ್ಟ್ ಹಿಂಸಾಚಾರ ನಿಲ್ಲಿಸಿದ ನಂತರವೇ ವಿಚಾರಣೆ ನಡೆಸುವುದಾಗಿ ಸ್ಪಷ್ಟವಾಗಿ ಹೇಳಿದೆ.
ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಸಾಂವಿಧಾನಿಕವೆಂದು ಘೋಷಿಸಬೇಕು ಮತ್ತು ಕಾನೂನು ಕೈಗೆತ್ತಿಕೊಂಡ 'ಕಾರ್ಯಕರ್ತರು, ವಿದ್ಯಾರ್ಥಿಗಳು, ಸುಳ್ಳು ಸುದ್ದಿ ಹರಡುವ ಮಾಧ್ಯಮಗಳ' ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಕೀಲ ವಿನೀತ್ ಧಂಡಾ ಎಂಬುವವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ, ಸಂಸತ್ತು ಅಂಗೀಕರಿಸಿದ ಕಾಯಿದೆಯನ್ನು ಸಾಂವಿಧಾನಿಕ ಎಂದು ನಾವು ಹೇಗೆ ಘೋಷಿಸಬಹುದು? ಅದಕ್ಕೆ ಯಾವಾಗಲೂ ಸಾಂವಿಧಾನಿಕತೆಯ ಶ್ರದ್ಧೆ ಇರುತ್ತದೆ. ನೀವು ಕಾನೂನಿನ ವಿದ್ಯಾರ್ಥಿಯಾಗಿದ್ದರೆ ತಿಳಿದುಕೊಳ್ಳಬೇಕು ಎಂದು ಸಿಜೆಐ ಪ್ರತಿಕ್ರಿಯಿಸಿದ್ದಾರೆ.