ನವದೆಹಲಿ:ಇನ್ನು ಕೇವಲ 36 ಗಂಟೆ ಮಾತ್ರವೇ ಬಾಕಿ... ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಹೋನ್ನತ ಕ್ಷಣಕ್ಕೆ ಬಾಕಿ ಉಳಿದಿರುವುದು ಕೇವಲ 36 ಗಂಟೆಗಳು ಮಾತ್ರ!
ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ನಿರೀಕ್ಷಿತ ರೀತಿಯಲ್ಲಿ ತನ್ನ ಗುರಿಯತ್ತ ಸಾಗುತ್ತಿದ್ದು, ಸೆಪ್ಟಂಬರ್ 7ರ ಮುಂಜಾನೆ ನಿರ್ದಿಷ್ಟ ಜಾಗದಲ್ಲಿ ಸುರಕ್ಷಿತವಾಗಿ ಇಳಿಯಲಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸುವ ಪ್ರಯತ್ನಕ್ಕೆ ಕೈ ಹಾಕಿರುವ ಇಸ್ರೋ ಸೆಪ್ಟೆಂಬರ್ 7ರ ರಾತ್ರಿ 1.40ರಿಂದ 1.55ರ ಅವಧಿಯಲ್ಲಿ ಸುರಕ್ಷಿತವಾಗಿ ಈ ಪ್ರಕ್ರಿಯೆ ನಡೆಸಲಿದೆ. ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಹಾಗೂ ರೋವರ್ ಇಳಿಸುವ ಪ್ರಯತ್ನ ಅತ್ಯಂತ ಕಠಿಣವಾಗಿದ್ದು, ಇಸ್ರೋ ವಿಜ್ಞಾನಿ ಅಸಾಧ್ಯವನ್ನು ಸಾಧ್ಯವಾಗಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.
ದಕ್ಷಿಣ ಧ್ರುವದಲ್ಲಿ ಇಳಿಯುವುದು ಮತ್ತು ಸುರಕ್ಷಿತವಾಗಿ ಇಳಿಸುವುದು ಅತ್ಯಂತ ಕ್ಲಿಷ್ಟಕರ ಮತ್ತು ಸವಾಲಿನಿಂದ ಕೂಡಿದ ಕೆಲಸ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಹೀಗಾಗಿ ಈ ಕಾರ್ಯದಲ್ಲಿ ಇಸ್ರೋ ಗೆದ್ದಿದ್ದೇ ಆದಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪನೆಯಾಗಲಿದೆ. ಇಸ್ರೋ ಪಡೆದುಕೊಳ್ಳುವ ಚಂದ್ರನ ಕುರಿತಾದ ಮಾಹಿತಿಯ ಬಗ್ಗೆ ವಿಶ್ವದ ಎಲ್ಲ ರಾಷ್ಟ್ರಗಳು ಕುತೂಹಲದ ಕಣ್ಣಿಟ್ಟಿವೆ.