ನವದೆಹಲಿ:ಮುಂದಿನ ಮೂರು - ನಾಲ್ಕು ತಿಂಗಳಲ್ಲಿ ಕೊರೊನಾ ವೈರಸ್ ಲಸಿಕೆ ಸಿದ್ಧವಾಗಲಿದೆ ಎಂಬ ವಿಶ್ವಾಸವಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.
ಹರ್ಷವರ್ಧನ್ ಫಿಕ್ಕಿ ಎಫ್‌ಎಲ್‌ಒ ವೆಬ್‌ನಾರ್‌ನಲ್ಲಿ 'ದಿ ಶಿಫ್ಟಿಂಗ್ ಹೆಲ್ತ್‌ಕೇರ್ ಪ್ಯಾರಾಡಿಗ್ಮ್ ಡ್ಯೂರಿಂಗ್ ಅಂಡ್ ಪೋಸ್ಟ್ ಕೋವಿಡ್' ಕುರಿತು ಮಾತನಾಡಿದ ಅವರು, ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಕೋವಿಡ್-19 ಲಸಿಕೆ ಸಿದ್ಧವಾಗಲಿದೆ ಎಂದು ನನಗೆ ವಿಶ್ವಾಸವಿದೆ. ಲಸಿಕೆಗೆ ಆದ್ಯತೆಯನ್ನ ವೈಜ್ಞಾನಿಕ ಮಾಹಿತಿಯ ಆಧಾರದ ಮೇಲೆ ವಿನ್ಯಾಸಗೊಳಿಸಲಾಗುವುದು ಎಂದರು.
ಆರೋಗ್ಯ ಕಾರ್ಯಕರ್ತರು ಮತ್ತು ಕೊರೊನಾ ಯೋಧರಿಗೆ ಸಹಜವಾಗಿ ಆದ್ಯತೆ ನೀಡಲಾಗುವುದು. ಆ ನಂತರ ವೃದ್ಧರು ಮತ್ತು ರೋಗ ಪೀಡಿತ ಜನರಿಗೆ ಒದಗಿಸುತ್ತೇವೆ. ಲಸಿಕೆ ಹಂಚಿಕೆಗೆ ಬಹಳ ವಿವರವಾದ ಯೋಜನೆ ನಡೆಯುತ್ತಿದೆ. ಇದರ ನೀಲನಕ್ಷೆ ಬಗ್ಗೆ ಚರ್ಚಿಸಲು ಇ - ಲಸಿಕೆ ಗುಪ್ತಚರ ವೇದಿಕೆ ರಚಿಸಲಾಗಿದೆ ಎಂದು ಹೇಳಿದರು.
ಲಸಿಕೆ ಸಾರ್ವಜನಿಕರಿಗೆ ಲಭ್ಯವಾದ ನಂತರ ಅದನ್ನು ಪತ್ತೆಹಚ್ಚುವುದು ದೊಡ್ಡ ಕೆಲಸವಾಗಿದೆ. 2021 ನಮ್ಮೆಲ್ಲರಿಗೂ ಉತ್ತಮ ವರ್ಷವಾಗಲಿ ಎಂದು ಆಶಿಸುತ್ತೇವೆ ಎಂದಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಆರೋಗ್ಯ ಸಚಿವರ ಹೇಳಿಕೆ ಉಲ್ಲೇಖಿಸಿದೆ.
2021ರ ಜುಲೈ - ಆಗಸ್ಟ್ ವೇಳೆಗೆ 25-30 ಕೋಟಿ ಜನರಿಗೆ 400 - 500 ಮಿಲಿಯನ್ ಡೋಸ್ ಲಭ್ಯವಾಗಲಿದೆ ಎಂದು ವರ್ಧನ್ ಅಂದಾಜಿಸಿದ್ದಾರೆ.