ಹೊಸದಿಲ್ಲಿ: ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೊನಾ ವೈರಸ್ ಭೀತಿ ಹಾಗೆಯೇ ಮುಂದುವರೆದಿದೆ. ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಪ್ರತಿ ಗಂಟೆಗೊಮ್ಮೆ ಮತ್ತಷ್ಟು ಜನರಿಗೆ ವೈರಸ್ ಸೋಂಕು ತಗುಲುತ್ತಿರುವ ಹಾಗೂ ಮರಣ ಹೊಂದುತ್ತಿರುವ ವರದಿಗಳು ಬರುತ್ತಲೇ ಇವೆ.
ಇಲ್ಲಿಯವರೆಗೆ ವಿಶ್ವಾದ್ಯಂತ ಸುಮಾರು 2 ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್-19 ಸೋಂಕು ತಗುಲಿದ್ದು, 7 ಸಾವಿರಕ್ಕೂ ಅಧಿಕ ಜನ ಮೃತ ಪಟ್ಟಿದ್ದಾರೆ. 80 ಸಾವಿರ ಜನ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ.
ಚೀನಾದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ:
ಈ ಮಧ್ಯೆ ಕೊರೊನಾ ವೈರಸ್ ಹುಟ್ಟಿನ ತಾಣ ಚೀನಾದಲ್ಲಿ ಪರಿಸ್ಥಿತಿ ಅತ್ಯಂತ ನಿಧಾನವಾಗಿಯಾದರೂ ಸುಧಾರಿಸುತ್ತಿದೆ. ಚೀನಾದಲ್ಲಿ ಈವರೆಗೆ 3237 ಜನ ಸಾವನ್ನಪ್ಪಿದ್ದಾರೆ. ಮಂಗಳವಾರವೇ 11 ಜನ ಮೃತ ಪಟ್ಟಿದ್ದು, ವುಹಾನ್ನಲ್ಲಿ ಮಂಗಳವಾರ ಓರ್ವ ವ್ಯಕ್ತಿಗೆ ಮಾತ್ರ ಸೋಂಕು ತಗುಲಿದೆ. ಒಟ್ಟಾರೆ ಪರಿಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಹುಬೇ ಪ್ರಾಂತ್ಯದಲ್ಲಿ ನಿಯೋಜಿಸಲಾಗಿರುವ ಸಾವಿರಾರು ವೈದ್ಯಕೀಯ ಸಿಬ್ಬಂದಿಯನ್ನು ಹಂತ ಹಂತವಾಗಿ ಚೀನಾ ಸರಕಾರ ಹಿಂದೆ ಕರೆಸಿಕೊಳ್ಳುತ್ತಿದೆ.
ಯುರೋಪ್ ರಾಷ್ಟ್ರಗಳಲ್ಲಿ ಹೆಚ್ಚಿದ ಕೊರೊನಾ ಸೋಂಕು:
ಯುರೋಪ್ ದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೇರೆ ಖಂಡಗಳ ಜನ ತಮ್ಮ ದೇಶಕ್ಕೆ ಬರದಂತೆ 30 ದಿನಗಳವರೆಗೆ ಗಡಿಗಳನ್ನು ಮುಚ್ಚಲು ಯುರೋಪಿಯನ್ ಒಕ್ಕೂಟ ನಿರ್ಧರಿಸಿದೆ. ಐರೋಪ್ಯ ರಾಷ್ಟ್ರ ಫ್ರಾನ್ಸ್ನಲ್ಲಿ ಸುಮಾರು 6000 ಜನರಿಗೆ ಸೋಂಕು ತಗುಲಿದ್ದು, 150 ಜನ ಮೃತ ಪಟ್ಟಿದ್ದಾರೆ.
ಮತ್ತೊಂದು ಐರೋಪ್ಯ ರಾಷ್ಟ್ರ ಇಟಲಿಯಲ್ಲಿ ಕೊರೊನಾ ವೈರಸ್ ಸೋಂಕು ಮಿತಿ ಮೀರಿ ಬೆಳೆಯುತ್ತಿದೆ. ವಿಶ್ವದಲ್ಲಿ ಚೀನಾ ಬಿಟ್ಟರೆ ಇಟಲಿಯೇ ಅತಿ ಹೆಚ್ಚು ಕೊರೊನಾ ಪ್ರಭಾವಿತ ದೇಶವಾಗಿದ್ದು, 2500 ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಇಲ್ಲಿ 32 ಸಾವಿರಕ್ಕೂ ಅಧಿಕ ಜನ ಸೋಂಕಿಗೊಳಗಾಗಿದ್ದು, ಪರಿಸ್ಥಿತಿ ಭೀಕರವಾಗಿದೆ.
ಸ್ಪೇನ್ನಲ್ಲಿ ಕೂಡ ಸೋಂಕು ಹಾವಳಿ ಹೆಚ್ಚಾಗಿದ್ದು, ಈವರೆಗೆ ಇಲ್ಲಿ ಸುಮಾರು 500 ಜನ ಮೃತ ಪಟ್ಟಿದ್ದಾರೆ. ಈಗ ಸ್ಪೇನ್ ಸಹ ಈಗ ತನ್ನ ನಗರಗಳನ್ನು ಸಂಪೂರ್ಣ ಮುಚ್ಚಿದೆ.