ನವದೆಹಲಿ:ಚೀನಾದಲ್ಲಿ ಉದ್ಭವವಾಗಿದ್ದ ರಕ್ಕಸ ಕೊರೊನಾ ಈಗಾಗಲೇ ವಿಶ್ವದಾದ್ಯಂತ ಲಗ್ಗೆ ಹಾಕಿದ್ದು, ಇದರ ಮಧ್ಯೆ ಭಾರತದಲ್ಲೂ ತನ್ನ ಆರ್ಭಟ ಶುರು ಮಾಡಿದ್ದರಿಂದ ಎಲ್ಲ ಜನರಲ್ಲೂ ಭೀತಿ ಹುಟ್ಟಿದೆ.
ಜನವರಿ 30ರಂದೇ ಭಾರತದಲ್ಲಿ ಮೊದಲ ಕೇಸ್ ಕಾಣಿಸಿಕೊಂಡಿದ್ದು, ಅಂದಿನಿಂದ ಇಲ್ಲಿಯವರೆಗೆ ಒಟ್ಟು 918 ಕೋವಿಡ್ ಪ್ರಕರಣಗಳು ಭಾರತದಲ್ಲಿ ಕಂಡು ಬಂದಿವೆ. ಮಹಾರಾಷ್ಟ್ರದಲ್ಲಿ 210 ಕೇಸ್, ಕೇರಳದಲ್ಲಿ 184 ಪ್ರಕರಣ ಹಾಗೂ ಕರ್ನಾಟಕದಲ್ಲಿ 70ಕ್ಕೂ ಹೆಚ್ಚು ಅತಿ ಹೆಚ್ಚು ಕೇಸ್ ಕಂಡು ಬಂದಿವೆ. ಉಳಿದ ರಾಜ್ಯಗಳಲ್ಲೂ ಕೊರೊನಾ ವೈರಸ್ ಹಬ್ಬುತ್ತಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಒಟ್ಟು 918 ಪ್ರಕರಣಗಳಲ್ಲಿ 80 ಜನರು ಗುಣಮುಖರಾಗಿ ಮನೆಗೆ ತೆರಳಿದ್ದು, 20 ಜನರು ಸಾವನ್ನಪ್ಪಿದ್ದಾಗಿ ಮಾಹಿತಿ ನೀಡಿದ್ದಾರೆ. ವಿದೇಶದಿಂದ ಬಂದ 15,24,266 ಜನರ ಸ್ಕ್ರೀನಿಂಗ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಒಂದು ಒಂದೇ ದಿನ 150ಕ್ಕೂ ಹೆಚ್ಚು ಕೇಸ್ ಕಂಡು ಬಂದಿವೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವ್ ಅಗರವಾಲ್, ವಯಸ್ಸಾದ ವ್ಯಕ್ತಿಗಳು ಈ ವೈರಸ್ಗೆ ಹೆಚ್ಚು ಬಲಿಯಾಗುತ್ತಿದ್ದು, ವಿದೇಶಗಳಲ್ಲೂ ಇದೇ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ತಿಳಿಸಿದ್ದಾರೆ.