ಬ್ರಸೆಲ್ಸ್:ಕೊರೊನಾ ವೈರಸ್ನಿಂದಾಗಿ ಕೇವಲ ಮನುಷ್ಯರಿಗೆ ಮಾತ್ರ ಕಂಟಕ ಎದುರಾಗಿಲ್ಲ, ಸಾಕು ಪ್ರಾಣಿಗಳೂ ಸಹ ಕೊರೊನಾ ವೈರಸ್ಗೆ ಒಳಗಾಗಿವೆ.
ಸೋಂಕಿತ ವ್ಯಕ್ತಿಗಳ ಸಂಪರ್ಕದಲ್ಲಿರುವ ಸಾಕುಪ್ರಾಣಿಗಳಿಗೂ ಸೋಂಕು ತಗುಲಿರುವುದು ಪತ್ತೆಯಾಗಿದೆ. ಬೆಲ್ಜಿಯಂನಲ್ಲಿ ವೈರಸ್ ಸೋಂಕಿತನ ಸಂಪರ್ಕದಲ್ಲಿದ್ದ ಬೆಕ್ಕಿಗೂ ಕೊರೊನಾ ಸೋಂಕು ಧೃಡಪಟ್ಟಿದೆ ಎಂದು ಬೆಲ್ಜಿಯಂ ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಹಾಂಗ್ಕಾಂಗ್ನಲ್ಲಿ ಸ್ಕ್ರೀನಿಂಗ್ ವೇಳೆ 2 ನಾಯಿಗಳಿಗೂ ಕೂಡ ವೈರಸ್ ತಗುಲಿರುವುದು ಧೃಡಪಟ್ಟಿದೆ.
ಇದೊಂದು ಪ್ರತ್ಯೇಕ ಪ್ರಕರಣವಾಗಿದ್ದು ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಸಾಧಿಸಿರುವ ಸಾಕುಪ್ರಾಣಿಗಳಿಗೆ ಸೋಂಕು ಹರಡಿದೆ ಅಂತ ಸರ್ಕಾರಿ ವೈದ್ಯ ಎಮ್ಯೂನುಯೆಲ್ ಆ್ಯಂಡ್ರೆ ಹೇಳಿದ್ದಾರೆ. ಅಲ್ಲದೆ ಬೆಲ್ಜಿಯಂನಲ್ಲಿ ಯಾವುದೇ ನಾಯಿಗಳಿಗೆ ಸೋಂಕು ಹರಡಿರುವುದು ಪತ್ತೆಯಾಗಿಲ್ಲ. ಆದರೆ ಬೆಕ್ಕಿನಲ್ಲಿ ಉಸಿರಾಟದ ಸಮಸ್ಯೆಯೂ ಸೇರಿ ಕೋವಿಡ್ನ ರೋಗಲಕ್ಷಣಗಳು ಕಂಡುಬಂದಿತ್ತು ಅಂತ ಆಹಾರ ಸುರಕ್ಷತಾ ಸಂಸ್ಥೆ (ಎಎಫ್ಎಸ್ಸಿಎ) ತಿಳಿಸಿದೆ.
ಇಲ್ಲಿ ಮನುಷ್ಯರಿಂದ ಸಾಕು ಪ್ರಾಣಿಗಳಿಗೆ ವೈರಸ್ ಹರಡಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಅಂತ ಸಾರ್ವಜನಿಕ ಪ್ರಾಧಿಕಾರ ಮಾಹಿತಿ ನೀಡಿದೆ.
ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಸಾಕು ಪ್ರಾಣಿಗಳೊಂದಿಗೆ ಮನೆಯಲ್ಲಿರುವಾಗ ಅಗತ್ಯ ಕ್ರಮ ತೆಗೆದುಕೊಳ್ಳಬೇಕು, ಅವುಗಳ ನೈರ್ಮಲ್ಯದ ಬಗ್ಗೆಯೂ ಗಮನ ಹರಿಸಬೇಕು, ಯಾವಾಗಲೂ ಸಾಕು ಪ್ರಾಣಿಗಳೊಂದಿಗೆ ಸಂಪರ್ಕ ಹೊಂದಬಾರದು, ಯಾವುದೇ ಪ್ರಾಣಿಗಳನ್ನು ಮುಟ್ಟಿದ ಬಳಿಕ ಕೈಗಳನ್ನು ತೊಳೆದುಕೊಳ್ಳಬೇಕು.