ನವದೆಹಲಿ: ಕೊರೊನಾದಿಂದಾಗಿ ವಿಶ್ವದಲ್ಲಿ ಸುಮಾರು 3.7 ಕೋಟಿ ಮಂದಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಬಡತನಕ್ಕೆ ಸಿಲುಕಿದ್ದಾರೆ ಎಂದು ಬಿಲ್ ಅಂಡ್ ಮಿಲಿಂದಾ ಗೇಟ್ಸ್ ಫೌಂಡೇಶನ್ ತನ್ನ ವರದಿಯಲ್ಲಿ ತಿಳಿಸಿದೆ.
ಬಿಲ್ ಅಂಡ್ ಮಿಲಿಂದಾ ಗೇಟ್ಸ್ ಫೌಂಡೇಶನ್ ಗೋಲ್ ಕೀಪರ್ ರಿಪೋರ್ಟ್ ಎಂಬ ವರದಿಯನ್ನು ಪ್ರಕಟಿಸಿದ್ದು, ಈ ವರದಿಯಲ್ಲಿ ಕೊರೊನಾ ವೈರಸ್ನಿಂದಾದ ಕೆಲವು ಪರಿಣಾಮಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ.
ಕೊರೊನಾ ಮಹಾಮಾರಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚಾಗಿ ದುಷ್ಪರಿಣಾಮ ಬೀರಿದ್ದು, ಈ ರಾಷ್ಟ್ರಗಳಲ್ಲಿ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಈ ಹಿನ್ನೆಲೆಯಲ್ಲಿ ಗೋಲ್ ಕೀಪರ್ ರಿಪೋರ್ಟ್ ಬಹಿರಂಗಪಡಿಸಿದ ಮಾಹಿತಿ ಇಂತಿದೆ.
- ಪ್ರಪಂಚದಾದ್ಯಂತ ಆರ್ಥಿಕ ಚೇತರಿಕೆಗಾಗಿ 18 ಲಕ್ಷ ಕೋಟಿ ಡಾಲರ್ಗಳ ವ್ಯಯ
- ಇದರಿಂದಾಗಿ 2021ರ ವೇಳೆಗೆ 12 ಲಕ್ಷ ಕೋಟಿ ಡಾಲರ್ಗಳ ನಷ್ಟ ಸಾಧ್ಯತೆ
- ಕೊರೊನಾದಿಂದಾಗಿ ಕೆಲವೇ ತಿಂಗಳಲ್ಲಿ ಶೇಕಡಾ 1ರಷ್ಟು ಬಡತನ ಏರಿಕೆ
- 20 ವರ್ಷಗಳಲ್ಲಿ ಸಾಧಿಸಿದ್ದ ಅಭಿವೃದ್ಧಿಯಲ್ಲಿ ಭಾರೀ ಕುಂಠಿತ
- ಕೊರೊನಾ ಸೋಂಕಿನಿಂದ ಮಾತ್ರವಲ್ಲದೇ ಪರೋಕ್ಷವಾಗಿ ಅನೇಕ ಮಂದಿ ಸಾವು
- ಕೋವಿಡ್ನಿಂದ ಆರೋಗ್ಯ ವಲಯದ ಮೇಲೆ ದುಷ್ಪರಿಣಾಮ
- ಕೇವಲ 25 ವಾರಗಳಲ್ಲಿ 25 ವರ್ಷಗಳ ನಷ್ಟ
- ಶೈಕ್ಷಣಿಕ ಚಟುವಟಿಕೆಗಳ ಮೇಲೆಯೂ ಕೊರೊನಾ ದುಷ್ಪರಿಣಾಮ
- ಹಿಂದುಳಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೊಡೆತ
ಇದರ ಜೊತೆಗೆ ಇನ್ನೂ ಹಲವಾರು ಪರಿಣಾಮಗಳನ್ನು ಬಿಲ್ ಅಂಡ್ ಮಿಲಿಂದಾ ಗೇಟ್ಸ್ ಫೌಂಡೇಶನ್ ಪಟ್ಟಿ ಮಾಡಿದ್ದು, ಈ ವರದಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಬಗ್ಗೆ ಹೆಚ್ಚಾಗಿ ಗಮನ ಕೇಂದ್ರೀಕರಿಸಲಾಗಿದೆ.