ಮುಂಬೈ: ಕೊರೊನಾ ವೈರಸ್ ಮಹಾರಾಷ್ಟ್ರದಲ್ಲಿ ಮೊದಲ ಬಲಿ ಪಡೆದಿದೆ. ದೇಶದಲ್ಲಿ ಕೊರೊನಾ ವೈರಸ್ನಿಂದ ಬಲಿಯಾದವರ ಸಂಖ್ಯೆ ಮೂರಕ್ಕೇರಿದೆ. 64 ವರ್ಷ ವಯಸ್ಸಿನ ವೃದ್ಧರೊಬ್ಬರು ಮಂಗಳವಾರ ಮುಂಬೈನ ಕಸ್ತೂರಬಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತ ವ್ಯಕ್ತಿಯು ದುಬೈ ಪ್ರವಾಸ ಮಾಡಿ ಭಾರತಕ್ಕೆ ಮರಳಿದ್ದರು ಎನ್ನಲಾಗ್ತಿದೆ.
ಮುಂಬೈನ ಘಾಟ್ಕೋಪರ್ ನಿವಾಸಿಯಾಗಿದ್ದ ಈ ವ್ಯಕ್ತಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕಸ್ತೂರಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಅಲ್ಲಿಗೆ ಭಾರತದಲ್ಲಿ ಈವರೆಗೆ ಒಟ್ಟು ಮೂರು ಜನ ಕೊರೊನಾ ವೈರಸ್ಗೆ ಬಲಿಯಾದಂತಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 39 ಜನ ಕೊರೊನಾ ವೈರಸ್ ಸೋಂಕಿನಿಂದ ಬಾಧಿತರಾಗಿದ್ದಾರೆ. ದೇಶದಲ್ಲಿ ಈವರೆಗೆ 125 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ.
ಈ ಮೊದಲು ಕೊರೊನಾ ಅಟ್ಟಹಾಸಕ್ಕೆ ಸಿಲುಕಿ ಕರ್ನಾಟಕದ ಕಲಬುರಗಿಯಲ್ಲಿ ವೃದ್ಧ ಸಾವನ್ನಪ್ಪಿದ್ದರು. ಬಳಿಕ ದೆಹಲಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಇಂದು ಮಹಾರಾಷ್ಟ್ರದಲ್ಲಿ ಮತ್ತೋರ್ವ ವ್ಯಕ್ತಿ ಕೊನೆಯುಸಿರೆಳೆದಿದ್ದು, ದೇಶಾದ್ಯಂತ ಒಟ್ಟು ಮೂವರನ್ನು ಕೋವಿಡ್ -19 ಬಲಿ ಪಡೆದಂತಾಗಿದೆ.