ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳ ವಲಯದಲ್ಲಿ ನಿರಂತರವಾಗಿ ಏರುತ್ತಿರುವ ಕೋವಿಡ್-19 ಪ್ರಕರಣಗಳು ಹಿರಿಯ ಅಧಿಕಾರಿಗಳಲ್ಲಿ ಚಿಂತೆ ಮೂಡಿಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಹೊಸ ಸೂಚನೆಗಳನ್ನು ಹೊರಡಿಸಲು ಸರ್ಕಾರವನ್ನು ಪ್ರೇರೇಪಿಸಿವೆ.
ಇತ್ತೀಚಿನ ಸೂಚನೆಗಳ ಪ್ರಕಾರ, ಯಾವುದೇ ಕೋಣೆಯಲ್ಲಿ ಯಾವುದೇ ಸಮಯದಲ್ಲಿ ಇಬ್ಬರಿಗಿಂತ ಹೆಚ್ಚು ಅಧಿಕಾರಿಗಳು ಉಪಸ್ಥಿತರಿರುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಮತ್ತು ಉಪ ಕಾರ್ಯದರ್ಶಿಗಿಂತ ಕೆಳಗಿನ ಹಂತದ ಯಾವುದೇ ಕಚೇರಿಯಲ್ಲಿ ಯಾವುದೇ ಸಮಯದಲ್ಲಿ ಇರಬಹುದಾದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಖ್ಯೆಯನ್ನು 30ಕ್ಕೆ ನಿರ್ಬಂಧಿಸಲಾಗಿದೆ ಎಂಬ ಮಾಹಿತಿ ಈಟಿವಿ ಭಾರತಕ್ಕೆ ಸಿಕ್ಕಿದೆ.
ಹೂಡಿಕೆ ಹಿಂತೆಗೆತ ಕಾರ್ಯದರ್ಶಿ ತುಹಿನ್ ಕಾಂತ್ ಪಾಂಡೆ ಅವರಿಗೆ ಕೋವಿಡ್-19 ವೈರಸ್ ಇರುವುದು ದೃಢಪಟ್ಟ ನಂತರ ಮಂಗಳವಾರ ಈ ಹೊಸ ಆದೇಶವನ್ನು ಹೊರಡಿಸಲಾಗಿದೆ. ಈ ಘಟನೆಯ ನಂತರ, ಕೇಂದ್ರ ಸರ್ಕಾರದ ಕಾರ್ಯದರ್ಶಿ ಹಂತದ ಅಧಿಕಾರಿಗಳ ಪೈಕಿ ಸೋಂಕು ದೃಢಪಟ್ಟಿರುವ ಎರಡನೇ ಅಧಿಕಾರಿ ಅವರಾಗಿದ್ದಾರೆ. ರಕ್ಷಣಾ ಕಾರ್ಯದರ್ಶಿ ಡಾ. ಅಜಯ ಕುಮಾರ ಮತ್ತು ಕೇಂದ್ರ ಸರ್ಕಾರದ ಮುಖ್ಯ ವಕ್ತಾರ ಕೆ.ಎಸ್. ಧಾಟ್‌ವಾಲಿಯಾ ಅವರಿಗೂ ಕೊರೊನಾ ಸೋಂಕು ತಗಲಿರುವ ವಿಷಯ ಕಳೆದ ವಾರವಷ್ಟೇ ದೃಢಪಟ್ಟಿತ್ತು.
"ಸರ್ಕಾರಿ ಕಟ್ಟಡದಲ್ಲಿರುವ ಅಧಿಕಾರಿಗಳು ಪಾಸಿಟಿವ್ ಆಗುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ವೇಗವಾಗಿ ಏರಿಕೆಯಾಗುತ್ತಿವೆ. ಅಧಿಕಾರಿಗಳನ್ನು ಸುರಕ್ಷಿತವಾಗಿಡಲು ಅತೀವ ಮುನ್ನೆಚ್ಚರಿಕೆಯನ್ನು ವಹಿಸಬೇಕಾದ ಅವಶ್ಯಕತೆಯಿದೆ" ಎಂದು ಜವಳಿ ಸಚಿವಾಲಯವು ನಿನ್ನೆ ಆದೇಶ ಹೊರಡಿಸಿದ್ದು, ಆ ಪ್ರತಿಯನ್ನು ಈಟಿವಿ ಭಾರತ ಪರಿಶೀಲಿಸಿದೆ.
ಈ ಪ್ರಕರಣದ ಕುರಿತು ಮಾಹಿತಿ ಹೊಂದಿರುವ ವ್ಯಕ್ತಿಯೊಂದರ ಪ್ರಕಾರ, ಇನ್ನೂ ಒಂದು ಅಥವಾ ಎರಡು ದಿನಗಳಲ್ಲಿ ಇತರ ಸಚಿವಾಲಯಗಳು ಸಹ ಇದೇ ರೀತಿಯ ಆದೇಶಗಳನ್ನು ಹೊರಡಿಸುವ ಪ್ರಕ್ರಿಯೆಯಲ್ಲಿವೆ.
ಯಾವುದೇ ಸಮಯದಲ್ಲಿ ಯಾವುದೇ ಕೊಠಡಿಯಲ್ಲಿ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳಿರುವುದನ್ನು ಈ ಆದೇಶ ನಿರ್ಬಂಧಿಸುತ್ತದೆ. ಅಷ್ಟೇ ಅಲ್ಲ, ಖಾಸಗಿ ಬಾಡಿಗೆ ವಾಹನಗಳ ಸಹಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಕೆ, ಅಥವಾ ನಿರ್ಬಂಧಿತ ವಲಯಗಳಿಗೆ ಹತ್ತಿರ ಅಥವಾ ಪಕ್ಕದಲ್ಲಿ ವಾಸವಾಗಿರುವ ಸಿಬ್ಬಂದಿ ಕಚೇರಿಗೆ ಹಾಜರಾಗುವುದನ್ನೂ ಇದು ಬೆಂಬಲಿಸುವುದಿಲ್ಲ.
ಕಾರ್ಯದರ್ಶಿ ಹಂತದ ಎರಡನೇ ಅಧಿಕಾರಿ ದೀಪಂ (ಡಿಐಪಿಎಂ) ಕಾರ್ಯದರ್ಶಿ ತುಹಿನ್ ಕಾಂತ್ ಪಾಂಡೆ ಅವರಿಗೆ ಕೊರೊನಾ ದೃಢಪಟ್ಟಿರುವ ವಿಷಯ ಮಂಗಳವಾರ ಬಯಲಾಗುತ್ತಲೇ ಈ ವಿಷಯ ತುರ್ತು ಸ್ವರೂಪವನ್ನು ಪಡೆದುಕೊಂಡಿತು.
ಸೋಂಕುರಹಿತವಾಗಿಸುವ ಉದ್ದೇಶದಿಂದ ಕಟ್ಟಡವನ್ನು ಮುಚ್ಚಲಾಗುತ್ತಿದೆ ಎಂದು ಕಚೇರಿ ಆದೇಶವೊಂದು ದೀಪಂ ಸಿಬ್ಬಂದಿಗೆ ಮಾಹಿತಿ ನೀಡಿತ್ತಲ್ಲದೇ, ಹೂಡಿಕೆ ಹಿಂತೆಗೆತ ಕಾರ್ಯದರ್ಶಿ ಸಹಿತ ಇನ್ನಿಬ್ಬರು ಅಧಿಕಾರಿಗಳಿಗೆ ಸೋಂಕು ತಗಲಿರುವುದನ್ನು ಅದು ದೃಢಪಡಿಸಿತ್ತು.
ತುಹಿನ್ ಕಾಂತ್ ಪಾಂಡೆ ಪ್ರಕರಣ ಆಕಸ್ಮಿಕವಲ್ಲ ಎಂಬ ಅಂಶ ಸರ್ಕಾರಿ ವಲಯಗಳಲ್ಲಿ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಲು ಕಾರಣವಾಯಿತು. ರಕ್ಷಣಾ ಕಾರ್ಯದರ್ಶಿ ಡಾ. ಅಜಯ ಕುಮಾರ್ ಮತ್ತು ಪಿಐಬಿ (ಪ್ರೆಸ್ ಇನ್ಫರ್ಮೇಶನ್ ಬ್ಯುರೊ) ಮುಖ್ಯಸ್ಥ ಕೆ.ಎಸ್. ಧಾಟ್‌ವಾಲಿಯಾ ಅಲ್ಲದೇ ಇತ್ತೀಚಿನ ದಿನಗಳಲ್ಲಿ ಹಲವಾರು ಹಿರಿಯ ಅಧಿಕಾರಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ ಹಣಕಾಸು ಸಚಿವಾಲಯದ ಆಧೀನ ಕಾರ್ಯದರ್ಶಿ ರಿತಾ ಮಲ್ ಹಾಗೂ ಕಾನೂನು ಮತ್ತು ನ್ಯಾಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ. ನಾರಾಯಣ ರಾವ್ ಬತ್ತು ಸಹ ಸೇರಿದ್ದಾರೆ.
ಕೇಂದ್ರ ಸರ್ಕಾರದ ಪ್ರಚಾರ ಅಂಗದ ಪ್ರಧಾನ ಮಹಾ ನಿರ್ದೇಶಕರಾಗಿ ಧಾಟ್‌ವಾಲಿಯಾ ಅವರು ಕೋವಿಡ್ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಗೃಹ ಸಚಿವಾಲಯಗಳು ನಡೆಸುತ್ತಿದ್ದ ಜಂಟಿ ಗೋಷ್ಠಿಗಳಲ್ಲಿ ಪ್ರಶ್ನೆ ಮತ್ತು ಉತ್ತರಗಳನ್ನು ನಿಭಾಯಿಸುತ್ತಿದ್ದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಹೊಂದಿರುವ ಕೆಲವರ ಪ್ರಕಾರ, ಕೆ.ಎಸ್. ಧಾಟ್‌ವಾಲಿಯಾ ಅವರ ಚಾಲಕ ಮತ್ತು ಸಿಬ್ಬಂದಿ ಪೈಕಿ ಒಬ್ಬ ವ್ಯಕ್ತಿಗೂ ಸೋಂಕು ದೃಢಪಟ್ಟಿದೆ. ಇದಾದ ನಂತರ, ಅವರ ಜೊತೆ ನಿಕಟವಾಗಿ ಕೆಲಸ ಮಾಡುತ್ತಿದ್ದ ಎಲ್ಲಾ ಅಧಿಕಾರಿಗಳೂ ಧಾಟ್‌ವಾಲಿಯಾ ಅವರಂತೆ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.
ಅದಾಗ್ಯೂ, ಉನ್ನತ ಅಧಿಕಾರಿಗಳೊಳಗೆ ಎಚ್ಚರಿಕೆಯ ಗಂಟೆಗಳು ಮೊಳಗಲು ಕಾರಣವೇನೆಂದರೆ, ಕೇಂದ್ರ ಸರ್ಕಾರದ ಪ್ರಚಾರ ಅಂಗದ ಮುಖ್ಯಸ್ಥರಾಗಿರುವ ಕೆ.ಎಸ್. ಧಾಟ್‌ವಾಲಿಯಾ ಅವರು ಕೇಂದ್ರದ ಹಲವಾರು ಸಚಿವರು ಮತ್ತು ಮಹತ್ವದ ಸಚಿವಾಲಯದ ಹಲವಾರು ಉನ್ನತ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿ ಇದ್ದುದು.
ಕಳೆದ ವಾರ ನಡೆದಿದ್ದ ಎರಡು ಸಂಪುಟ ಸಭೆಗಳ ಕುರಿತ ವಿವರಗಳನ್ನು ಕೆ.ಎಸ್. ಧಾಟ್‌ವಾಲಿಯಾ ಅವರು ಸೋಮವಾರ (ಜೂನ್ 1) ಮತ್ತು ಬುಧವಾರ (ಜೂನ್ 3) ಸಹ ಹಂಚಿಕೊಂಡಿದ್ದರು. ಈ ಸಂದರ್ಭದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್, ಸಾರಿಗೆ ಮತ್ತು ಎಂಎಸ್‌ಎಂಇ ಸಚಿವ ನಿತಿನ್ ಗಡ್ಕರಿ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಜೊತೆ ಅವರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಮಂಗಳವಾರದಂದು ಧಾಟ್‌ವಾಲಿಯಾ ಅವರು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರೊಂದಿಗಿನ ಮತ್ತೊಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಈ ಗೋಷ್ಠಿಯಲ್ಲಿ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಮತ್ತು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಸಂಜಯ್ ಧೋತ್ರೆ ಸಹ ಪಾಲ್ಗೊಂಡಿದ್ದರು.