ಬೀಜಿಂಗ್ [ಚೀನಾ]:ಚೀನಾದಲ್ಲಿ ಮಾರ್ಚ್ 7 ರಂದು 27 ಜನರು ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಇದರೊಂದಿಗೆ, ಜಗತ್ತಿನಾದ್ಯಂತ ಇಲ್ಲಿಯವರೆಗೆ 3,097 ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಮಹಾಮಾರಿ ಕೊರೊನಾಗೆ ಚೀನಾದಲ್ಲಿ ಶನಿವಾರ ಒಂದೇ ದಿನದಲ್ಲಿ 27 ಬಲಿ - ರಾಷ್ಟ್ರೀಯ ಆರೋಗ್ಯ ಆಯೋಗ
ಮಾರಣಾಂತಿಕ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಪ್ರಪಂಚದಾದ್ಯಂತ 93 ದೇಶಗಳಲ್ಲಿ ಶನಿವಾರ ಒಂದೇ ದಿನ ಒಟ್ಟು 21,114 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ, ಚೀನಾದಲ್ಲಿ 1,660 ಕ್ಕೂ ಹೆಚ್ಚು ಜನರು ಆಸ್ಪತ್ರೆಗಳಿಂದ ತಮ್ಮ ತಮ್ಮ ಮನೆಗಳಿಗೆ ಮರಳಿದ್ದು, ಇಲ್ಲಿಯವರೆಗೆ 57,065 ಜನರು ಕೊರೊನಾದಿಂದ ಚೇತರಿಸಿಕೊಂಡಿರುವುದಾಗಿ ಅಲ್ಲಿ ಮಾಧ್ಯಮವೊಂದು ವರದಿ ಮಾಡಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ಪ್ರಸ್ತುತ ವಿಶ್ವದಾದ್ಯಂತ 101,927 ಕೊರೊನಾ ವೈರಸ್ ಪ್ರಕರಣಗಳಿದ್ದು, ಚೀನಾ ಹೊರತುಪಡಿಸಿ ಕೊರೊನಾಗೆ 413 ಜನರು ಸಾವನ್ನಪಿದ್ದಾರೆ. ಇನ್ನು ಈ ಮಾರಣಾಂತಿಕ ಕಾಯಿಲೆ ಜಗತ್ತಿನ ಒಟ್ಟು 93 ದೇಶಗಳಲ್ಲಿ ಹಬ್ಬಿದ್ದು, ನ್ಯೂಯಾರ್ಕ್ನಲ್ಲಿ ನಿನ್ನೆ ಒಂದೇ ದಿನದಲ್ಲಿ 76 ಪ್ರಕರಣಗಳು ಪತ್ತೆಯಾದ ಕಾರಣ ಅಲ್ಲಿನ ಗವರ್ನರ್ ನಗರದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.