ನವದೆಹಲಿ:ಇಂದು ಹೊಸದಾಗಿ ಬಿಎಸ್ಎಫ್ ಸಿಬ್ಬಂದಿಯಲ್ಲಿ 30 ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಂತೆ ಪ್ಯಾರಾ ಮಿಲಿಟರಿ ಪಡೆಗಳಲ್ಲಿನ ಕೊರೊನಾ ಸೋಂಕಿತರ ಸಂಖ್ಯೆ 500ಕ್ಕೆ ಮುಟ್ಟಿದೆ. ಇದರಲ್ಲಿ ಐದು ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಐನೂರರ ಗಡಿ ಮುಟ್ಟಿದ ಪ್ಯಾರಾ ಮಿಲಿಟರಿ ಪಡೆಗಳಲ್ಲಿನ ಕೊರೊನಾ ಸೋಂಕಿತರ ಸಂಖ್ಯೆ! - ಸಿಐಎಸ್ಎಫ್
ಬಿಎಸ್ಎಫ್ ಸಿಬ್ಬಂದಿಯಲ್ಲಿ 30 ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಂತೆ ಪ್ಯಾರಾ ಮಿಲಿಟರಿ ಪಡೆಗಳಲ್ಲಿನ ಕೊರೊನಾ ಸೋಂಕಿತರ ಸಂಖ್ಯೆ 500ರ ಗಡಿ ಮುಟ್ಟಿದೆ.
ಗಡಿ ಭದ್ರತಾ ಪಡೆಯಲ್ಲಿ ಇಂದು 30 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 24 ಮಂದಿ ತ್ರಿಪುರಾದಲ್ಲಿ ಹಾಗೂ 6 ಮಂದಿ ದೆಹಲಿಯಲ್ಲಿ ಪತ್ತೆಯಾಗಿದ್ದಾರೆ. ಇದರಿಂದಾಗಿ ಬಿಎಸ್ಎಫ್ (ಗಡಿ ಭದ್ರತಾ ಪಡೆ)ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 221ಕ್ಕೆ ಏರಿಕೆಯಾಗಿದೆ. ಎಲ್ಲಾ ಸೋಂಕಿತರಿಗೂ ಏಮ್ಸ್, ಝಜ್ಜರ್ ಹಾಗೂ ಅಗರ್ತಲಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಎಸ್ಎಫ್ ಹೇಳಿಕೊಂಡಿದೆ.
ಇನ್ನು ಸಿಐಎಸ್ಎಫ್ ( ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ)ಯಲ್ಲಿ ಕೊರೊನಾ ಸೋಂಕಿದ್ದ ಓರ್ವ ಸಿಬ್ಬಂದಿ ಕೋಲ್ಕತ್ತಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾನೆ. ಈತ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಪ್ಯಾರಾ ಮಿಲಿಟರಿ ಪಡೆಯಲ್ಲಿ ಮೃತನಾದ ಐದನೇ ಸಿಬ್ಬಂದಿಯಾಗಿದ್ದಾನೆ.
ಇದಕ್ಕೂ ಮೊದಲು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ 35 ಮಂದಿಗೆ ಸೋಂಕು ದೃಢಪಟ್ಟಿತ್ತು. ಇದರಲ್ಲಿ ಮುಂಬೈ ವಿಮಾನ ನಿಲ್ದಾಣ ಹಾಗೂ ದೆಹಲಿಯ ಮೆಟ್ರೋದಲ್ಲಿ ತಲಾ 11 ಮಂದಿ, ದೆಹಲಿ ವಿಮಾನ ನಿಲ್ದಾಣದಲ್ಲಿ ಮೂವರು, ಮುಂಬೈ ಬಂದರಿನಲ್ಲಿ ಇಬ್ಬರು ಕಾರ್ಯನಿರ್ವಹಿಸುತ್ತಿದ್ದರು ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಸಿಆರ್ಪಿಎಫ್ನಲ್ಲಿ 162 ಮಂದಿ ಸಿಬ್ಬಂದಿಗೆ, ಐಟಿಬಿಪಿಯ 82 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಪ್ಯಾರಾ ಮಿಲಿಟರಿಯ ಪಡೆಗಳ ಒಟ್ಟು ಸೋಂಕಿತರ ಸಂಖ್ಯೆ 500ಕ್ಕೆ ತಲುಪಿದೆ.