ನವದೆಹಲಿ: ಕೊರೊನಾ ಭೀತಿಯಿಂದ ದೇಶಾದ್ಯಂತ ಲಾಕ್ ಡೌನ್ನಿಂದಾಗಿ ಜನರು ಮನೆಯಲ್ಲಿಯೇ ಕುಳಿತು ಏನು ಮಾಡುವುದೆಂಬ ಚಿಂತೆಯಲ್ಲಿದ್ದಾರೆ. ಈಗ ಜನರ ಮನರಂಜನೆಗಾಗಿ ದೂರದರ್ಶನದಲ್ಲಿ ಜನಪ್ರಿಯ 'ರಾಮಾಯಣ' ಹಾಗು 'ಮಹಾಭಾರತ' ಧಾರವಾಹಿಯನ್ನು ಮತ್ತೆ ಪ್ರಾರಂಭಿಸಲು ನಿನ್ನೆಯಷ್ಟೇ ಕೇಂದ್ರ ಸರ್ಕಾರ ನಿರ್ಧರಿಸಿತ್ತು.
ಇಂದಿನಿಂದ ಮನೆಯಲ್ಲಿ ಕುಳಿತು ನೋಡಿ 'ರಾಮಾಯಣ','ಮಹಾಭಾರತ': ಡಿಡಿಯಲ್ಲಿ ಮರುಪ್ರಸಾರ - ಲಾಕ್ ಡೌನ್
ಇವತ್ತಿನಿಂದ ಜನರು ತಮ್ಮ ಮನೆಗಳಲ್ಲಿ ಜಗ ಮೆಚ್ಚಿದ ಪೌರಾಣಿಕ ಕಥಾನಕಗಳಾದ 'ರಾಮಾಯಣ' ಹಾಗೂ 'ಮಹಾಭಾರತ' ಧಾರವಾಹಿಯನ್ನು ವೀಕ್ಷಿಸಬಹುದು.
ಮುಂಜಾನೆ 9.00ಗಂಟೆಗೆ ಹಾಗೂ ರಾತ್ರಿ 9.00 ಗಂಟೆಗೆ ಪ್ರಸಾರವಾಗಲಿದೆ. ಹಾಗೆಯೇ ಬಹು ಜನರ ಒತ್ತಾಯದ ಮೇರೆಗೆ 'ಮಹಾಭಾರತ' ಧಾರವಾಹಿಯ ಪ್ರಸಾರವೂ ಆಗಲಿದೆ. ಅದು ಸಹಾ ದಿನಕ್ಕೆರಡು ಬಾರಿ ಪ್ರಸಾರಗೊಳ್ಳಲಿದ್ದು ಮಧ್ಯಾಹ್ನ 12.00 ಗಂಟೆಗೆ ದಿನದ ಮೊದಲ ಪ್ರಸಾರ ಹಾಗೂ ಮರುಪ್ರಸಾರ ಸಂಜೆ 7.00 ಕ್ಕೆ ವೀಕ್ಷಕರ ಮುಂದೆ ಬರಲಿದೆ.
1987ರಲ್ಲಿ ಪ್ರಸಾರವಾಗಿದ್ದ ಜನಪ್ರಿಯ ಧಾರವಾಹಿಯನ್ನು ರಮಾನಂದ್ ಸಾಗರ್ ನಿರ್ದೇಶಿಸಿದ್ದರು. ಈಗ ಸಾರ್ವಜನಿಕರ ಒತ್ತಾಯದ ಮೇರೆಗೆ ಡಿಡಿ ನ್ಯಾಷನಲ್ ವಾಹಿನಿಯು ಮತ್ತೆ ಜನರಿಗೆ ಮನರಂಜನೆ ನೀಡಲು ಒಪ್ಪಿಕೊಂಡಿದೆ. ಈ ವಿಚಾರವನ್ನು ನಿನ್ನೆ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಟ್ವೀಟ್ ಮೂಲಕ ತಿಳಿಸಿದ್ದರು. ಅಲ್ಲದೆ ಇಂದು ಮೊದಲ ಪ್ರಸಾರವನ್ನು ಜಾವ್ಡೇಕರ್ ತಮ್ಮ ಮನೆಯಲ್ಲಿಯೇ ಕುಳಿತು ವೀಕ್ಷಿಸಿದ್ದಾರೆ.