ಕೊರೊನಾ ವೈರಸ್ ಎನ್ನುವ ಸಾಂಕ್ರಾಮಿಕ ವೈರಾಣು ಪ್ರಪಂಚದಾದ್ಯಂತ ಲಕ್ಷಾಂತರ ಜೀವಗಳನ್ನು ಬಲಿತೆಗೆದುಕೊಂಡಿದೆ. ಈ ವೈರಸ್ ನಮ್ಮದೇಹದೊಳಗಿನ ಉಸಿರಾಟದ ವ್ಯವಸ್ಥೆಯನ್ನು ಮಾತ್ರವೇ ಪ್ರವೇಶಿಸಿ ದಾಳಿ ನಡೆಸುತ್ತದೆ ಎಂದು ಬಹುತೇಕರ ತಿಳುವಳಿಕೆಯಾಗಿದೆ. ಆದರೆ ವಿಷಯ ಹಾಗಿಲ್ಲ. ಈ ವೈರಾಣು ನಮ್ಮ ದೇಹದ ಇತರ ಅಂಗಗಳಾದ ಕಣ್ಣು, ಹೃದಯ, ಯಕೃತ್ತು (ಲಿವರ್), ಮೆದುಳು ಮತ್ತು ಕಿಡ್ನಿಗಳ ಮೇಲೂ ದಾಳಿ ನಡೆಸಬಲ್ಲದು.
ಲಂಡನ್‍ನ ಕಿಂಗ್ಸ್ ಕಾಲೇಜ್ ಹಾಸ್ಪಿಟಲ್ನಲ್ಲಿ ಕನ್ಸಲ್ಟಂಟ್ ಕಾರ್ಡಿಯಾಲಜಿಸ್ಟ್ ಆಗಿ ಕೆಲಸ ಮಾಡುವ ಪ್ರೊ. ಅಜಯ್ ಶಾ ಅವರು ಈ ವೈರಾಣುವಿನ ವ್ಯಾಪ್ತಿ ಈ ಮೊದಲು ನಾವೆಲ್ಲಾ ತಿಳಿದುಕೊಂಡಿದ್ದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿದೆ ಎಂದಿದ್ದಾರೆ. ತಮ್ಮ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೊರೊನಾ ಸೋಂಕಿತ ರೋಗಿಗಳನ್ನು ಪರೀಕ್ಷಿಸಿದ ಬಳಿಕ ಅವರು ಮೇಲಿನ ತೀರ್ಮಾನಕ್ಕೆ ಬಂದಿದ್ದಾರೆ. ಯಾವುದೇ ರೋಗಸೂಚನೆಯಿಲ್ಲದೆ ಕಾಣಿಸುವ ಸೋಂಕಿನ ಪ್ರಕರಣಗಳೊಂದಿಗೆ ಗುಣಮುಖರಾದ ಬಹುಪಾಲು ಸೋಂಕಿತರಲ್ಲಿ ಈ ವೈರಾಣು ದುರ್ಬಲಗೊಳ್ಳುತ್ತಿರುವುದು ಕಂಡುಬಂದಿದೆ. ಕೊವಿಡ್-19ನ ಇತ್ತೀಚಿನ ಕೆಲವು ಗುಣಲಕ್ಷಣಗಳನ್ನು ದ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ನಮ್ಮ ಶ್ವಾಸನಾಳದ ಜೀವಕೋಶಗಳು ಕೊರೊನಾ ವೈರಸ್ ಕಣಗಳನ್ನು ಹೆಚ್ಚಾಗಿ ಆಕರ್ಷಿಸುತ್ತವೆ. ಆರಂಭದಲ್ಲಿ ವೈರಾಣು ನಮ್ಮ ಮೂಗಿನ ಹೊರಳೆಯಲ್ಲಿ ತಂಗುತ್ತದೆ. ಈ ಸಮಯದಲ್ಲಿ ಸೋಂಕಿತರಾದವರಿಗೆ ವಾಸನೆ ತೆಗೆದುಕೊಳ್ಳುವ ಶಕ್ತಿ ಕುಂದಬಹುದು. ನಂತರ ಆ ವೈರಾಣು ನಿಧಾನಕ್ಕೆ ಮೂಗಿನ ರಂಧ್ರದ ಮೂಲಕ ಗಂಟಲನ್ನು ಪ್ರವೇಶಿಸುತ್ತದೆ. ಕೊರೊನಾ ವೈರಸ್ ಅಂಟಿಕೊಳ್ಳುವ ACE2 ರಿಸೆಪ್ಟರ್‍ಗಳು ಗಂಟಲಿನ ಲೋಳೆಪೊರೆಗಳಲ್ಲಿ ಹೆಚ್ಚಾಗಿರುತ್ತವೆ. ಅದರ ಮೇಲ್ಪದರದ ಮೇಲೆ ಪ್ರೋಟೀನ್ ಬಂದು ಕುಕ್ಕಿದಾಗ ವೈರಾಣು ದ್ವಿಗುಣಗೊಳ್ಳಲಾರಂಬಿಸುತ್ತದೆ. ಈ ಅವಧಿಯಲ್ಲಿ ರೋಗಿ ಯಾವುದೇ ರೋಗಚಿನ್ಹೆಗಳನ್ನು ತೋರದೇ ಹೋಗಬಹುದು. ಆದರೆ ಈ ಹೊತ್ತಿಗಾಗಲೇ ಆ ಸೋಂಕಿತ ವ್ಯಕ್ತಿ ಇತರರಿಗೆ ವೈರಾಣುವನ್ನು ಹರಡುತ್ತಿರಬಹುದು. ನಮ್ಮ ಗಂಟಲನ್ನು ವೈರಾಣು ಪ್ರವೇಶಿಸಿದೊಡನೆ ನಮ್ಮ ರೋಗನಿರೋಧಕ ವ್ಯವಸ್ಥೆ ಪ್ರತಿಕ್ರಿಯಿಸಲು ವಿಫಲವಾದಲ್ಲಿ ವೈರಾಣು ನಮ್ಮ ಶ್ವಾಸಕೋಶದೊಳಗೆ ತೂರಿಕೊಳ್ಳುತ್ತದೆ. ನಮ್ಮ ಉಸಿರಾಟದ ಕೊಳವೆಗಳಲ್ಲಿ ಒಮ್ಮೆ ವೈರಾಣು ಚಲಿಸತೊಡಗಿದಾಗ ವೈರಾಣುಸ್ಫೋಟ ಆರಂಭಗೊಳ್ಳುತ್ತದೆ. ACE2 ರಿಸೆಪ್ಟರುಗಳ ಮೂಲಕ ವೈರಾಣುವಿನ ಪ್ರೋಟೀನುಗಳು ಶ್ವಾಸಕೋಶದೊಳಕ್ಕೆ ಸೇರಿಕೊಳ್ಳುತ್ತವೆ. ತದನಂತರ ಶ್ವಾಸಕೋಶಗಳಲ್ಲಿ ಊತ ಕಂಡುಬರುತ್ತದೆ. ಆಗ ಉಸಿರಾಟ ಬಹಳ ಕಷ್ಟವಾಗುತ್ತದೆ. ಇಂತಹ ಒಂದು ಸ್ಥಿತಿಗೆ ನ್ಯುಮೋನೈಟಿಸ್ ಎಂದು ಹೆಸರು. ಕೆಲವು ರೋಗಿಗಳು ಅಕ್ಯೂಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್ (ARDS) ಅಂದರೆ ತೀವ್ರತರದ ಉಸಿರಾಟದ ತೊಂದರೆ ಎದುರಿಸುತ್ತಾರೆ. ಈ ಹಂತದಲ್ಲಿ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಕಡಿಮೆಯಾಗುತ್ತದೆ. ಈ ಹಂತದಲ್ಲಿ ರೋಗಿಗೆ ವೆಂಟಿಲೇಟರ್ ಅನಿವಾರ್ಯವಾಗುತ್ತದೆ. ಆದರೆ ವೈರಾಣು ಹರಡುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಈ ಅವಧಿಯಲ್ಲಿ ವೆಂಟಿಲೇಟರುಗಳ ಮೂಲಕ ಯಂತ್ರಚಾಲಿತ ಉಸಿರಾಟ ನಡೆಯುವಂತೆ ಮಾಡಿ ರೋಗಿಯ ದೇಹವೇ ವೈರಾಣುವಿನ ವಿರುದ್ಧ ಹೋರಾಟ ನಡೆಸಿ ವೈರಾಣುಗಳನ್ನು ಹಿಮ್ಮೆಟ್ಟಿಸಬೇಕಾಗುತ್ತದೆ. ಇದು ನಡೆಯುವವರೆಗೂ ನಾವು ಕಾಯದೇ ವಿಧಿಯಿಲ್ಲ. ಈ ಹಂತದಲ್ಲಿ ಹಠಾತ್ತನೆ ಅತಿಹುರುಪಿನ ರೋಗನಿರೋಧಕ ಚಟುವಟಿಕೆ ನಡೆಯುವುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಈ ಸಂದರ್ಭದಲ್ಲಿ ಪ್ಲಾಸ್ಮಾದಲ್ಲಿನ ರೋಗನಿರೋಧಕ ಕಣಗಳಾದ ಇಮ್ಯುನೋಗ್ಲೋಬ್ಯುಲಿನ್ ವೈರಾಣುಗಳಿಗೆ ಆಶ್ರಯ ನೀಡಿದ ಅತಿಥೇಯ ಜೀವಕೋಶಗಳ ಮೇಲೆ ವ್ಯಾಪಕ ದಾಳಿ ನಡೆಸುತ್ತವೆ. ಇಷ್ಟೆಲ್ಲಾ ನಡೆಯುವ ಹೊತ್ತಿಗೆ ಇಡೀ ದೇಹವೇ ಊದಿಕೊಳ್ಳುತ್ತದಲ್ಲದೇ ಹೃದಯಬಡಿತ ರಭಸವಾಗುತ್ತದೆ. ರಕ್ತನಾಳಗಳು ಸಹ ಊದಿಕೊಂಡಿರುತ್ತವೆ. ಶೇ. 20ರಷ್ಟು ರೋಗಿಗಳಲ್ಲಿ ಕಿಡ್ನಿ ವೈಫಲ್ಯ ಕಾಣಿಸಿಕೊಳ್ಳುತ್ತದೆ. ಹತೋಟಿ ತಪ್ಪಿದ ಸೈಟೋಕೀನ್ ಗಳು ಬಿರುಗಾಳಿಯಂತೆ ನುಗ್ಗತೊಡಗುವುದರಿಂದ ಹೃದಯಕ್ಕೂ ಹಾನಿಯಾಗುತ್ತದೆ ಎನ್ನಲಾಗಿದೆ. ICUನಲ್ಲಿ ಇರಿಸಲಾದ ಕೊರೊನಾ ವೈರಸ್ ಸೋಂಕಿತರು ಬಹುಅಂಗಾಂಗ ವಿಫಲತೆಯಿಂದ ಸಾಯಲು ಇದು ಕಾರಣವಾಗಿದೆ.
ಹೃದಯ ಮತ್ತು ರಕ್ತನಾಳಗಳ ಮೇಲೆ ಕೊರೊನಾ ವೈರಸ್ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕೂಲಂಕುಶವಾಗಿ ಅಧ್ಯಯನ ನಡೆಸಬೇಕಾಗಿದೆ. ರಕ್ತನಾಳಗಳ ಗೋಡೆಗಳ ಮೇಲೆ ವೈರಾಣುಗಳು ದಾಳಿ ನಡೆಸಿ ರಕ್ತನಾಳಗಳು ಊದಿಕೊಳ್ಳುವಂತೆ ಮಾಡುತ್ತವೆ. ಇದರಿಂದ ಹೃದಯಾಘಾತವಾಗುತ್ತದೆ.