ಹೈದರಾಬಾದ್:ವಿಲಕ್ಷಣ ಕೊರೊನಾ ವೈರಸ್ನ ರೂಪಾಂತರಗಳನ್ನು ಕಂಡುಹಿಡಿಯಲು ಮತ್ತು ಅದರ ಜೀನೋಮ್ ಅನುಕ್ರಮದ ಕಗ್ಗಂಟು ಬಿಡಿಸಲು ಸೂಕ್ತವಾದ ಸುಧಾರಿತ ವೈಜ್ಞಾನಿಕ ತಂತ್ರಜ್ಞಾನ ಭಾರತದಲ್ಲಿ ಇದೆ ಎಂದು ದೆಹಲಿ ಐ ಐ ಟಿಯ ಜೈವಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಯ್ಯದ್ ಇ ಹಸ್ನೈನ್ ಅವರು ಹೇಳಿದ್ದಾರೆ. ಈ ವೈರಸ್‌ಗೆ ಔಷಧಗಳು ಮತ್ತು ಲಸಿಕೆಗಳನ್ನು ಭಾರತೀಯ ಸಂಸ್ಥೆಗಳು ಕಂಡುಹಿಡಿಯುತ್ತಿವೆ ಎಂದು ಅವರು ತಿಳಿಸಿದ್ದಾರೆ. ಲಸಿಕೆಯನ್ನು ಎಲ್ಲಿಯಾದರೂ ಅಭಿವೃದ್ಧಿಪಡಿಸಬಹುದಾಗಿದ್ದು ಇದಕ್ಕೆ ಕೆಲವು ತಿಂಗಳುಗಳಿಂದ ಒಂದು ವರ್ಷದವರೆಗೆ ಸಮಯ ಹಿಡಿಯಬಹುದು ಎಂದು ವಿಜ್ಞಾನ ನೀತಿ ಸಲಹೆಗಾರರೂ ಆಗಿರುವ ಪ್ರೊಫೆಸರ್ ಹಸ್ನೈನ್ ಹೇಳಿದ್ದಾರೆ.
ಸರ್ಕಾರ ಮತ್ತು ಆರೋಗ್ಯ ತಜ್ಞರು ರೂಪಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ಜನರಿಗೆ ಸಲಹೆ ನೀಡಿದ್ದಾರೆ. ಇದಲ್ಲದೆ, ಪರೀಕ್ಷೆಯ ಪ್ರಮಾಣ ಹೆಚ್ಚಿಸುವುದು ಉತ್ತಮ ಮಾರ್ಗ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರೊಫೆಸರ್ ಹಸ್ನೈನ್ ಅವರಿಗೆ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಆರ್ಡರ್ ಆಫ್ ಮೆರಿಟ್ ನೀಡಲಾಗಿದೆ. ಅವರು 2016 ರಲ್ಲಿ ಜಾಮಿಯಾ ಹಮ್ದಾರ್ದ್ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಅಧಿಕಾರ ವಹಿಸಿಕೊಂಡರು. ‘ಈ ಭಾರತ್’ಗಾಗಿ ಹಸ್ನೈನ್ ಅವರು ನೀಡಿದ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ.
- ಹೊಸ ವೈರಲ್ ದಾಳಿಗೆ ಕಾರಣ ಏನು? ನಾವು ಅವುಗಳನ್ನು ಮೊದಲೇ ಗುರುತಿಸಬಹುದೇ ?
ಹೊಸ ವೈರಸ್‌ಗಳ ರಚನೆ ಎಂಬುದು ನೈಸರ್ಗಿಕ ಪ್ರಕ್ರಿಯೆ. ವೈರಸ್ ಕಣಗಳು ನಿಧಾನವಾಗಿ ವಿಕಸನಗೊಳ್ಳುತ್ತವೆ. ಈ ಪ್ರಕ್ರಿಯೆ ಹಲವಾರು ದಶಕಗಳನ್ನು ತೆಗೆದುಕೊಳ್ಳಬಹುದು. ವೈರಸ್ ನ ಭೌಗೋಳಿಕ ಮೂಲವು ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅವುಗಳನ್ನು ಮೊದಲೇ ಕಂಡುಹಿಡಿಯುವುದು ಅಸಾಧ್ಯ. ಕೋವಿಡ್ - 19 ಗೆ ಕಾರಣವಾದ ಸಾರ್ಸ್ - ಕೋವ್- 2ನ ಮೂಲವನ್ನು ಗುರುತಿಸುವುದು ಕಷ್ಟ. ಎಚ್ ಐ ವಿ ಕಂಡುಹಿಡಿದ ನೊಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟಾಗ್ನಿಯರ್ ಅವರು ಈ ವಿಲಕ್ಷಣ ಕೊರೊನಾ ವೈರಸ್ ನ ಮೂಲ, ಪ್ರಯೋಗಾಲಯ ಆಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
- ಭಾರತದಲ್ಲಿ ಕೋವಿಡ್ - 19 ಕುರಿತ ಸಂಶೋಧನೆಗೆ ಸೌಲಭ್ಯಗಳು ಹೇಗೆ ಇವೆ ?
ಜೀನೋಮ್ ಅನುಕ್ರಮ ಗುರುತಿಸಲು ಮತ್ತು ವೈರಸ್ ನ ಆನುವಂಶಿಕ ರೂಪಾಂತರಗಳನ್ನು ಕಂಡುಹಿಡಿಯಲು ಮೂಲಭೂತ ಸೌಲಭ್ಯಗಳು ಇಲ್ಲಿ ಇವೆ. ಕೋವಿಡ್ - 19 ಗಾಗಿ ಔಷಧಗಳು ಮತ್ತು ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯ ನಮ್ಮ ದೇಶಕ್ಕೆ ಇದೆ. ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ( ಎಸ್ ಐ ಐ ) ನಮ್ಮ ದೇಶದಲ್ಲಿ ಇಮ್ಯುನೊ ಬಯಾಲಾಜಿಕಲ್ ಔಷಧಿಗಳನ್ನು ತಯಾರಿಸುವಲ್ಲಿ ಅಗ್ರಸ್ಥಾನದಲ್ಲಿ ಇದೆ. ಹಿಂದೆ, ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ರೋಟಾವಾಕ್ ( ಮೊದಲ ರೋಟವೈರಸ್ ಲಸಿಕೆ ) ಯನ್ನು ಅಭಿವೃದ್ಧಿಪಡಿಸಿದೆ ಮತ್ತು ವಿಶ್ವದ ಎಲ್ಲೆಡೆ ಲಕ್ಷಾಂತರ ಜೀವಗಳನ್ನು ಉಳಿಸಿದೆ.
- ಸಾಂಕ್ರಾಮಿಕ ರೋಗ ನಿಯಂತ್ರಣ ಮಾಡುವಲ್ಲಿ ಭಾರತ ಯಾವ ಕ್ರಮಗಳನ್ನು ಕೈಗೊಂಡಿದೆ ?