ನವದೆಹಲಿ: ಕೊರೊನೊ ವೈರಸ್ ಹೇರಿರುವ ಹೊಸ ಸ್ಥಿತ್ಯಂತರಗಳಿಗೆ ಈ ಜಗತ್ತು ಎಚ್ಚರಗೊಳ್ಳುತ್ತಿದ್ದಂತೆ ವ್ಯಕ್ತಿಯೊಬ್ಬನ ಸಾವೆಂಬುದು ಯಾವುದೇ ಸಂಪ್ರದಾಯ, ಆಚರಣೆಯಿಲ್ಲದಂತೆ ಮುಗಿದು ಹೋಗುತ್ತಿದೆ. ಸಾವು ಈಗ ಒಂದು ಸಂಖ್ಯೆಯ ಮಟ್ಟಕ್ಕೆ ಇಳಿದು ಹೋಗಿದೆ. ಹೊಸ ವೈರಾಣುವಿನಿಂದ ಉಂಟಾಗುತ್ತಿರುವ ಸಾವುಗಳು ಈಗ ಸೋಂಕಿನ ವ್ಯಾಪಕತೆಯನ್ನು ತಿಳಿಸಲು ಒಂದು ರೆಫರೆನ್ಸ್ ಪಾಯಿಂಟ್ ಆಗುವುದರೊಂದಿಗೆ ಇಡೀ ಸಮಾಜವೇ ಸಾಮೂಹಿಕ ರೋಗನಿರೋಧಕ ಶಕ್ತಿಯನ್ನು ಮೈಗೂಡಿಡಿಕೊಳ್ಳುವ ಮುನ್ನ ಅದೆಷ್ಟು ಜನರು ಸಾವಿನ ದವಡೆಗೆ ಸಿಲುಕಬಹುದು ಎಂದು ಲೆಕ್ಕಾಚಾರ ಹಾಕಲೂ ಈ ಸಾವುಗಳು ಬಳಕೆಯಾಗುತ್ತಿವೆ.
ಹೀಗೆ ಕೋವಿಡ್ 19 ಸೋಂಕಿಗೆ ಸಿಲುಕಿ ಕಡಿಮೆ ಸಾವಿನ ದರ ದಾಖಲಾಗಿರುವ ಐಸ್‍ಲ್ಯಾಂಡ್, ಚೀನಾದಂತಹ ದೇಶಗಳಂತಹ ಉದಾಹರಣೆಗಳನ್ನು ನೋಡುತ್ತಾ ಸಾವಿನ ದರ ಶೇಕಡಾ 1ಕ್ಕಿಂತ ಕಡಿಮೆ ಇರುವುದನ್ನು ನೋಡಿ ಅನೇಕರು ತಾವು ಸಾವಿನಿಂದ ಬಚಾವಾಗಬಹುದು ಎಂಬ ಸಮಾಧಾನಕ್ಕೆ ಒಳಗಾಗುತ್ತಿದ್ದಾರೆ. ಒಂದು ವೇಳೆ ಈ ದರ ಶೇಕಡಾ 3 ರಷ್ಟಾದರೆ ಏನಾಗುತ್ತದೆ? ಈ ಅಂಕಿ ಅಂಶಗಳು ಜನರು ಸಾಯುವ ಸಂಖ್ಯೆಯನ್ನು ಮರೆಮಾಚುವುದಷ್ಟೇ ಅಲ್ಲ ಅವರ ಹೆಸರು, ಬದುಕಿನಲ್ಲಿ ಅವರ ಸ್ಥಾನಮಾನವನ್ನೂ ಮರೆಮಾಚುತ್ತಿವೆ.
ಇಟಲಿಯಲ್ಲಿ ಕೊರೊನಾದಿಂದ ಸಾವಿಗೀಡಾದವರ ಸರಾಸರಿ ವಯಸ್ಸು 78+ ಆದರೆ ಅಮೆರಿಕದಲ್ಲಿ ಇದೇ ರೀತಿ ಇಲ್ಲ. ಅಲ್ಲಿ ಸತ್ತವರಲ್ಲ ಕಪ್ಪು ಜನರ ಸಂಖ್ಯೆ ಹೆಚ್ಚಿದೆ. ಇಲ್ಲೆಲ್ಲೂ ಸತ್ತವರನ್ನು ಹೂಳುವಾಗ ಯಾರೂ ಇರುವುದಿಲ್ಲ. ತಮ್ಮನ್ನು ಶಾಶ್ವತವಾಗಿ ಅಗಲಿದವದವರ ದೇಹಗಳಿಗೆ ಅಂತ್ಯ ಸಂಸ್ಕಾರವನ್ನೂ ನಡೆಸಲಾಗದೇ ಜನರು ಪ್ರತ್ಯೇಕತೆಯಲ್ಲಿ ಇದ್ದುಕೊಂಡು ದುಃಖಿಸುತ್ತಿದ್ದಾರೆ. ಭಾರತದ ಒಂದು ನಗರದಲ್ಲಿ ಹೀಗೆ ಸತ್ತ ವ್ಯಕ್ತಿಯೊಬ್ಬನನ್ನು 252 ಎಂಬ ಸಂಖ್ಯೆಯಿಂದ ಕರೆಯಲಾಯಿತಲ್ಲದೇ ಅವನ ಪಾರ್ಥಿವ ಶರೀರವನ್ನು ಸದ್ದಿಲ್ಲದೆ ಅಂತ್ಯ ಸಂಸ್ಕಾರ ಮಾಡಿದ ಅಧಿಕಾರಿಗಳು ಆ ವ್ಯಕ್ತಿಯ ಕುಟುಂಬದ ಯಾರನ್ನೂ ಬರಲು ಬಿಡಲಿಲ್ಲ.
ಆ ವ್ಯಕ್ತಿಯನ್ನು ಅಂತ್ಯ ಸಂಸ್ಕಾರ ನಡೆಸುವ ಜಾಗದಲ್ಲಿ ಸೋಂಕು ಹರಡುವುದನ್ನು ತಡೆಯಲು ಇಂತಹ ನಿರ್ಬಂಧವನ್ನು ಹೇರಲಾಗಿತ್ತು. ಸಾವು ಎನ್ನುವುದು ಖಾಸಗಿ ಸಂಗತಿಯಾಗಿ ಸಾವಿಗೀಡಾದ ವ್ಯಕ್ತಿಯ ಕುಟುಂಬದವರು ಮತ್ತು ಬಂಧು ಮಿತ್ರರು ದುಃಖ-ಸಂತಾಪ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು. ಈಗಲೂ ಅವರು ಸಂತಾಪ ಸೂಚಿಸಬಹುದು. ಆದರೆ ಗತಿಸಿದವರ ದೇಹದ ಅಂತ್ಯ ಸಂಸ್ಕಾರ ಯಾರಿಗೂ ತಿಳಿಯದೆಯೇ ನಡೆದುಹೋಗಬಹುದು ಇಲ್ಲವೇ ಅದು ಭೀತಿ ತುಂಬಿದ ವಾತಾವರಣದಲ್ಲಿ ನಡೆಯುವಂತಾಗಿದೆ.
ಈಗ ಆವರಿಸಿರುವ ಸಾಂಕ್ರಾಮಿಕ ರೋಗವನ್ನು ಅರಿತುಕೊಳ್ಳಲು ಎಲ್ಲರೂ ಪ್ರಯತ್ನಿಸುತ್ತಿರುವಂತೆಯೇ ಇನ್ನಿತರ ದೇಶಗಳ ಜನರಂತೆ ಭಾರತೀಯರ ಮನಸುಗಳನ್ನು ಸಹ ಜನನ-ಮರಣದ ಪ್ರಶ್ನೆಗಳು ಕಾಡತೊಡಗಿವೆ. ನಮ್ಮ ದೇಶದಲ್ಲಿ ಏನಾಗಲಿದೆ? ಇಲ್ಲಿ ಈ ರೋಗ ಹೆಚ್ಚುತ್ತಿದೆಯೋ ಅಥವಾ ಕಡಿಮೆಯಾಗುತ್ತಿದೆಯೋ -ಎಷ್ಟು ಜನ ನಿಜಕ್ಕೂ ಸಾಯುತ್ತಿದ್ದಾರೆ? ಇಂತಹ ಅನೇಕ ಪ್ರಶ್ನೆಗಳನ್ನು ಹಾಕಿಕೊಂಡು ಜನರು ತಮ್ಮದೇ ಉತ್ತರಗಳನ್ನು ಕಂಡುಕೊಳ್ಳುವ ಸನ್ನಾಹದಲ್ಲಿದ್ದಾರೆ. ಸಾಂಕ್ರಾಮಿಕ ರೋಗತಜ್ಞರು, ಗಣಿತಶಾಸ್ತ್ರಜ್ಞರು ಒಂದೆಡೆಯಲ್ಲಿ ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನ ಉಪಯೋಗಿಸಿಕೊಂಡು ಉತ್ತರ ಕಂಡುಕೊಳ್ಳುವಲ್ಲಿ ನಿರತಾಗಿದ್ದರೆ ಇಂಜಿನಿಯರುಗಳು ಮತ್ತಿತರರು ತಮ್ಮಬುದ್ಧಿಭಾರಗಳನ್ನು ಇದಕ್ಕಾಗಿಯೇ ಖರ್ಚು ಮಾಡುತ್ತಿದ್ದಾರೆ. ಹಾಗಂತ ಇದು ಯಾರ ಬುದ್ಧಿಯನ್ನೂ ಹೆಚ್ಚಿಸಿಲ್ಲ.
ಒಂದು ಪ್ರಶ್ನೆಯನ್ನು ನಾವೆಲ್ಲ ಕೇಳಿಕೊಳ್ಳಬೇಕಿದೆ. ಕೊರೊನಾವೈರಸ್ ಖಾಯಿಲೆಯೇ ಸಮಾಜದ ಅತಿದೊಡ್ಡ ಕೊಲೆಗಡುಕ ಖಾಯಿಲೆಯೇ? ಇದನ್ನು ಹೊರತುಪಡಿಸಿ ದಿನನಿತ್ಯ ಉಂಟಾಗುತ್ತಿರುವ ಇನ್ನಿತರ ಸಾವುಗಳಿಗೆ ಕಾರಣವಾಗಿ ಮರಣ ದರವನ್ನು ವ್ಯಾಪಕವಾಗಿ ಹೆಚ್ಚಿಸಿರುವ ಕ್ಯಾನ್ಸರ್, ರಸ್ತೆ ಅಪಘಾತ, ಅಧಿಕ ರಕ್ತದೊತ್ತಡ ಇತ್ಯಾದಿಗಳೆಲ್ಲ ಲೆಕ್ಕಕ್ಕಿಲ್ಲವೇ? ಕೊರೊನಾವೈರಸ್ ಇಲ್ಲದಿದ್ದಾಗ ಅವು ಎಷ್ಟು ಜನರ ಬಲಿತೆಗೆದುಕೊಳ್ಳುತ್ತಿದ್ದವೋ ಈಗಲೂ ಅದೇ ರೀತಿ ಬಲಿತೆಗೆದುಕೊಳ್ಳುತ್ತಿಲ್ಲವೇ? ನಮ್ಮ ನೆತ್ತಿಯ ಮೇಲಿನ ಆಕಾಶ ದಟ್ಟವಾಗಿ ಕವಿದುಕೊಂಡಿದ್ದಾಗ, ಉಸಿರಾಡುವ ಗಾಳಿ ಮಲಿನವಾಗಿದ್ದಾಗ, ಟ್ರ್ಯಾಫಿಕ್ ಹುಚ್ಚಾಪಟ್ಟೆಯಾಗಿದ್ದಾಗ ಮತ್ತು ಚಾಲನೆ ಮಾಡುವಾಗ ಒಂದು ಗ್ಲಾಸ್ ಏರಿಸುತ್ತಿದ್ದಾಗ ಆಗುತ್ತಿದ್ದ ಸಾವುಗಳ ಬಗ್ಗೆ ಯೋಚಿಸಿದ್ದೇವೆಯೇ? ಇದರ ಪರಿಣಾಮವನ್ನು ದೃಢೀಕರಿಸಿ ಹೇಳಲು ಸೂಕ್ತ ಅಂಕಿಅಂಶಗಳ ಕೊರತೆಯಿದೆ.
ಇಂದು ರಸ್ತೆಯ ಮೇಲೆ ಜನರು ಓಡಾಡದ ಕಾರಣ ರಸ್ತೆ ಅಪಘಾತಗಳಲ್ಲಿ ಯಾರೂ ಸಾಯುತ್ತಿಲ್ಲ. ಲಾಕ್‍ಡೌನ್ ಬಿಸಿ ತಾಳಲಾರದೇ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಹೋಗಲು ಹವಣಿಸಿದ ವಲಸೆ ಕಾರ್ಮಿಕರು ರಸ್ತೆ ಅಪಘಾತದಲ್ಲಿ ಮರಣಿಸಿದ್ದು ಇದಕ್ಕೆ ಅಪವಾದ. ಪಂಜಾಬಿನಲ್ಲಿ ಪೊಲೀಸನೊಬ್ಬ ವಾಹನ ಚಾಲಿಸುತ್ತಿದ್ದಾಗ ಎದುರಿನಿಂದ ಮೊಟಾರು ಸೈಕಲ್ಲಿನಲ್ಲಿ ವೇಗವಾಗಿ ಬಂದ ವ್ಯಕ್ತಿಯೊಬ್ಬ ಡಿಕ್ಕಿ ಹೊಡೆಸಿದ್ದು ಮತ್ತೊಂದು ಅಪವಾದ. ಇಂತಹ ಒಂದೆರಡು ಬಿಡಿಬಿಡಿ ಘಟನೆಗಳನ್ನು ಬಿಟ್ಟರೆ ರಸ್ತೆ ಅಪಘಾತಗಳು ನಿಂತೇ ಹೋಗಿವೆ ಎನ್ನಬಹುದು.