ಮುಂಬೈ(ಮಹಾರಾಷ್ಟ್ರ):ಆ ಕಾರ್ಮಿಕ ಅಪಾಯಕಾರಿ ಧಾರಾವಿ ಪ್ರದೇಶದಿಂದ ಉತ್ತರ ಪ್ರದೇಶಕ್ಕೆ ಹೋಗಬೇಕಾಗಿತ್ತು. ಹೀಗಾಗಿ ಆತ ಆಟೋವೊಂದನ್ನ ಬಾಡಿಗೆಗೆ ಪಡೆದು ಪ್ರಯಾಣ ಬೆಳೆಸಿದ್ದ. ಆದರೆ ಚೆಕ್ಪೋಸ್ಟ್ನಲ್ಲಿ ಪೊಲೀಸರ ಕಂಡು ಭಯಬಿದ್ದ ಆತ, ತನ್ನ ಬಳಿ ಇದ್ದ ಹಣದ ಚೀಲ ಹಾಗೂ ಬೆಲೆ ಬಾಳುವ ವಸ್ತುಗಳನ್ನ ಆಟೋದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದ.
ಕಾರ್ಮಿಕ ಪೊಲೀಸರ ಕಂಡು ಪೇರಿ ಕಿತ್ತಿದ್ದರಿಂದ ಸಹಜವಾಗೇ ಆಟೋದಲ್ಲೇ ಆತನ ಹಣ, ವಸ್ತುಗಳು ಉಳಿದವು. ಆದರೆ ಆಟೋ ಚಾಲಕ ಸಹ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ಮಾಹಿತಿದಾರರೊಬ್ಬರು ಇದೆನ್ನಲ್ಲ ಗಮನಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು...
ಈ ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು, ಆ ಆಟೋಚಾಲಕ ಹಾಗೂ ಆಟೋವನ್ನ ಪತ್ತೆ ಹಚ್ಚಿದ್ದರು.
ಈ ವೇಳೆ, 90,000 ರೂ. ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿರುವ ಚೀಲವನ್ನ ಚಾಲಕನಿಂದ ವಶಕ್ಕೆ ಪಡೆದಿದ್ದಾರೆ. ಆ ಬಳಿಕ ಆ ಚೀಲದಲ್ಲಿದ್ದ ನಂಬರ್ ಪತ್ತೆ ಹಚ್ಚಿ ಫೋನ್ ಮಾಡಿ ಆ ಹಣವನ್ನ ಕಾರ್ಮಿಕನಿಗೆ ಪೊಲೀಸರು ತಲುಪಿಸಿದ್ದಾರೆ.ಇಷ್ಟಕ್ಕೆಲ್ಲ ಕಾರಣ ಕೊರೊನಾ ವೈರಸ್ ಹಾಗೂ ಧಾರಾವಿಗೆ ಹಾಕಿದ್ದ ಲಾಕ್ಡೌನ್..
ಈ ಘಟನೆ ಹಿನ್ನೆಲೆ ಏನು? ಪೊಲೀಸ್ ಅಧಿಕಾರಿಯ ಮಾಹಿತಿ ಪ್ರಕಾರ, "ಕಾರ್ಮಿಕ ರಾಜೇಂದ್ರ ನಿಷಾದ್(28) ಮೂರು ದಿನಗಳ ಹಿಂದೆ ತನ್ನ ಕುಟುಂಬ ಸದಸ್ಯರೊಂದಿಗೆ ಧಾರಾವಿಯಿಂದ ಉತ್ತರ ಪ್ರದೇಶ ತಲುಪಲು ಆಟೋರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದ. ರಿಕ್ಷಾ ಮುಲುಂಡ್ ಚೆಕ್‌ಪೋಸ್ಟ್‌ಗೆ ತಲುಪಿದಾಗ, ಅಲ್ಲಿನ ಪೊಲೀಸ್ ಉಪಸ್ಥಿತಿಯಿಂದಾಗಿ ನಿಷಾದ್ ಕುಟುಂಬ ಭಯಬಿದ್ದು ರಿಕ್ಷಾ ಇಳಿದು ಪರಾರಿಯಾಗಿತ್ತು. ಈ ಮಧ್ಯೆ ಅವರು ತಮ್ಮ ಬಳಿ ಇದ್ದ ಚೀಲವನ್ನು ಮರೆತಿದ್ದಾರೆ" ಎಂದು ಅಧಿಕಾರಿ ಹೇಳಿದರು.
ಸದ್ಯ ಚೀಲವನ್ನು ವಶಪಡಿಸಿಕೊಂಡಿದ್ದ ಪೊಲೀಸರು ಅದರ ವಾರಸುದಾರರಿಗೆ ನಗದು ಚೀಲವನ್ನ ಒಪ್ಪಿಸಿದ್ದಾರೆ. ಇನ್ನು ಚಾಲಕನ ವಿರುದ್ಧ ಯಾವುದೇ ಅಪರಾಧ ಪ್ರಕರಣ ದಾಖಲಿಸಿಲ್ಲ ಎಂದು ಅಂಧೇರಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಬೆಡ್ಜ್ ತಿಳಿಸಿದ್ದಾರೆ.