ನವದೆಹಲಿ: ನಿರ್ಭಯಾ ಪ್ರಕರಣದಲ್ಲಿ ಅತ್ಯಾಚಾರಿಗಳ ವಿರುದ್ಧ ಮರಣದಂಡನೆ ಜಾರಿಗೊಳಿಸಲಾಗಿದೆ. ಆದರೂ ದೇಶದಲ್ಲಿನ ಅತ್ಯಾಚಾರ ಪ್ರಕರಣಗಳಲ್ಲಿನ ಶಿಕ್ಷೆಯ ಪ್ರಮಾಣವು ಶೇಕಡಾ 27.2 ರಷ್ಟಿದೆ. ಇದು ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿನ ಲೋಪ ಎಂಬುದು ಸಾಮಾಜಿಕ ಕಾರ್ಯಕರ್ತರ ವಾದವಾಗಿದೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಪ್ರಕಾರ, 2018 ರಲ್ಲಿ 1,56,327 ಅತ್ಯಾಚಾರ ಪ್ರಕರಣಗಳು ವಿಚಾರಣೆಯಲ್ಲಿದ್ದವು. ಈ ಪೈಕಿ 17,313 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, ಕೇವಲ 4,708 ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿದೆ. 11,133 ಅತ್ಯಾಚಾರ ಪ್ರಕರಣಗಳಲ್ಲಿ ಖುಲಾಸೆ ಮತ್ತು 1,472 ಪ್ರಕರಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದಲ್ಲದೆ, 2018 ರಲ್ಲಿ ಒಟ್ಟು 1,38,642 ಅತ್ಯಾಚಾರ ಪ್ರಕರಣಗಳು ಬಾಕಿ ಉಳಿದಿದ್ದವು. 2018 ರ ಅತ್ಯಾಚಾರ ಪ್ರಕರಣಗಳಲ್ಲಿನ ಶಿಕ್ಷೆಯ ಪ್ರಮಾಣವು ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿತ್ತು. 2017 ರಲ್ಲಿ, 5,822 ಅತ್ಯಾಚಾರ ಪ್ರಕರಣಗಳಲ್ಲಿ 18,099 ಅಪರಾಧ ಸಾಬೀತಾದಾಗ, 32.2 ಶೇ. ಶಿಕ್ಷೆಯ ಪ್ರಮಾಣವನ್ನು ನೀಡಲಾಗಿದೆ ಎಂದು ಎನ್‌ಸಿಆರ್‌ಬಿ ವರದಿ ತೋರಿಸಿದೆ.
23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ 2012 ರಲ್ಲಿ ನಡೆದಿದ್ದ ಅತ್ಯಾಚಾರ ಮತ್ತು ಹತ್ಯೆಯ ನಂತರ ಅತ್ಯಾಚಾರ-ವಿರೋಧಿ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೂ ಕಡಿಮೆ ಶಿಕ್ಷೆಯ ಪ್ರಮಾಣವು ಮುಂದುವರಿಯುತ್ತಿದೆ. 2012 ರ ಡಿಸೆಂಬರ್ 16-17ರ ಮಧ್ಯರಾತ್ರಿ ದಕ್ಷಿಣ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಆರು ಜನರಿಂದ ಆಕೆ ಅತ್ಯಾಚಾರಕ್ಕೊಳಗಾಗಿದ್ದಳು. ನಂತರ ಚಿಕಿತ್ಸೆ ಫಲಕಾರಿಯಾಗದೆ ಸಿಂಗಪುರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಇದರಿಂದ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದವರಿಗೆ ಮತ್ತು ಬದುಕುಳಿದವರಿಗೆ ತ್ವರಿತ ನ್ಯಾಯ ಒದಗಿಸಲು ನ್ಯಾಯಾಂಗ ವ್ಯವಸ್ಥೆಯ ಸಂಪೂರ್ಣ ಕೂಲಂಕಷ ಪರಿಶೀಲನೆ ಅಗತ್ಯವಿದೆ ಎಂದು ಮಹಿಳಾ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಮಹಿಳಾ ಸಬಲೀಕರಣ ಗುಂಪಿನ ಮುಖಂಡೆ ಸಾಹೇಲಿಯ ವಾನಿ ಸುಬ್ರಮಣಿಯನ್ "ಈ ದೇಶದಲ್ಲಿ ಲೈಂಗಿಕ ದೌರ್ಜನ್ಯಗಳು ನಡೆಯುತ್ತಲೇ ಇವೆ. ಈ ಅಪರಾಧಗಳನ್ನು ಮಾಡುವವರಿಗೆ ನಿಜವಾದ ಕಠಿಣ ಶಿಕ್ಷೆ- ಕಾನೂನುಗಳನ್ನು ಜಾರಿಗೊಳಿಸಬೇಕಿದೆ" ಎಂದು ಹೇಳಿದರು. ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮತ್ತು ಸಿಪಿಐ ನಾಯಕಿ ಅನ್ನಿ ರಾಜಾ, ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕಡಿಮೆ ಶಿಕ್ಷೆಯ ಪ್ರಮಾಣಕ್ಕೆ ಏಕೈಕ ಪರಿಹಾರವಲ್ಲ ಎಂದು ಹೇಳಿದರು. ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗೆ 1,023 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಕೇಂದ್ರದ ನಿರ್ಧಾರವನ್ನು ಅವರು ಶ್ಲಾಘಿಸಿದ್ದಾರೆ.