ಕಾಶೀಪುರ: ಉತ್ತರಾಖಂಡ್ನ ಕೊಟ್ವಾಲಿಯಲ್ಲಿ ನಡೆದ ಪ್ರಕರಣವೊಂದು ಕಾಶೀಪುರ ಪೊಲೀಸರ ನಿದ್ದೆ ಕೆಡಿಸಿದ್ದಲ್ಲದೆ, ನಾಯಿಯೊಂದು ರಾತ್ರಿಯಿಡೀ ಜೈಲಿನಲ್ಲಿ ಕಳೆದಿದೆ. ಇಷ್ಟಾದರೂ ಸಹ ಪ್ರಕರಣ ಮಾತ್ರ ಇತ್ಯರ್ಥವಾಗಿಲ್ಲ.
ಕಾಶೀಪುರದ ನಿವಾಸಿ ನಿರ್ಮಲ್ ಸಿಂಗ್ ವರ್ಮಾ ಎಂಬುವರ ಲ್ಯಾಬ್ರಡಾರ್ ತಳಿಯ ಸಾಕುನಾಯಿ ಡಿಸೆಂಬರ್ 26 ರಂದು ಕಾಣೆಯಾಗಿತ್ತು. ಕೆಲ ದಿನಗಳ ನಂತರ ಜ.12 ರಂದು ಅಮಿತ್ ಎಂಬುವರು ಕಾಶಿಪುರದ ರೈಲ್ವೆ ಕ್ರಾಸಿಂಗ್ ಬಳಿ ಶ್ವಾನ ಸಿಕ್ಕಿರುವುದಾಗಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡುತ್ತಾರೆ. ಬಳಿಕ ಅಮಿತ್ ಅವರ ಬಳಿ ಬಂದು ನಿರ್ಮಲ್ ಸಿಂಗ್ ತಮ್ಮ ನಾಯಿಯನ್ನು ತೆಗೆದುಕೊಂಡು ಹೋಗುತ್ತಾರೆ.
ರಾತ್ರಿಯಿಡೀ ಜೈಲಿನಲ್ಲೇ ಕಳೆದ ನಾಯಿ ಆದರೆ, ಈ ಕಥೆಗೆ ಟ್ವಿಸ್ಟ್ ಸಿಗೋದು ಕಾಶಿಪುರದ ಮತ್ತೊಂದು ಪ್ರದೇಶದ ಅನುರಾಗ್ ಚವ್ಹಾಣ್ ಎಂಬ ವ್ಯಕ್ತಿ ನಿರ್ಮಲ್ ಸಿಂಗ್ ಬಳಿ ಬಂದು ಇದು ತಾವು ಸಾಕಿರುವ ನಾಯಿ ಬ್ರೂನಿ ಎಂದು ಅದೇ ನಾಯಿಯ ಪೋಟೋ ತೋರಿಸುತ್ತಾರೆ. ಹೀಗೆ ಇಬ್ಬರೂ ನಾಯಿ ತಮ್ಮದೆಂದು ತಮ್ಮ ತಮ್ಮ ಬಳಿ ಇರುವ ಅದೇ ನಾಯಿಯ ಫೋಟೋ ತೋರಿಸಿ ಪೊಲೀಸರಿಗೆ ದೂರು ನೀಡುತ್ತಾರೆ. ರಾತ್ರಿಯಿಡೀ ಈ ಕುರಿತು ಪೊಲೀಸರು ತನಿಖೆ ನಡೆಸಿದರೂ ನಾಯಿ ನಿಜವಾಗಿ ಯಾರಿಗೆ ಸೇರಿದ್ದು ಎಂಬುದರ ಕುರಿತು ಸುಳಿವು ಮಾತ್ರ ಸಿಗುವುದಿಲ್ಲ. ಹೀಗಾಗಿ ನಾಯಿಯು ಕೂಡ ಪೊಲೀಸರೊಂದಿಗೆ ರಾತ್ರಿಯಿಡೀ ಜೈಲಿನಲ್ಲಿ ಕಳೆಯುವಂತಾಯಿತು.
ಕೊನೆಗೊಂದು ಉಪಾಯ ಹುಡುಕಿದ ಪೊಲೀಸರು, ಎರಡೂ ಮನೆಗಳ ಮಧ್ಯದ ದಾರಿಯಲ್ಲಿ ನಾಯಿಯನ್ನು ಬಿಟ್ಟು ಅದು ಯಾರ ಮನೆಯ ಮಾರ್ಗದೆಡೆ ಹೋಗುತ್ತದೆಯೇ ಅವರಿಗೆ ಸೇರಿದ್ದು ಎಂದು ನಿರ್ಧರಿಸುತ್ತಾರೆ. ಆದ್ರೆ ಆ ನಾಯಿ ಎಲ್ಲೂ ಹೋಗದೆ ಅಲ್ಲೇ ಉಳಿದುಕೊಂಡ ಹಿನ್ನೆಲೆಯಲ್ಲಿ ಪ್ರಕರಣ ಬಗೆಹರಿದಿಲ್ಲ. ಇದು ಪೊಲೀಸರ ನಿದ್ದೆಗೆಡಿಸಿದೆ.