ನವದೆಹಲಿ:ಕೋವಿಡ್ ಲಾಕ್ಡೌನ್ನಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳಿ ಬಂದಿದ್ದು, ಇದೀಗ ಜವಳಿ ಕೈಗಾರಿಕೆ ಹಾಗೂ ಇತರ ಉದ್ಯಮಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಕಾರ್ಮಿಕರ ಕೊರತೆ ಎದುರಾಗಿದೆ.
ಜವಳಿ ಕೈಗಾರಿಕೆ ಹಾಗೂ ಕಟ್ಟಡ ನಿರ್ಮಾಣದಂತಹ ಮೂಲಸೌಕರ್ಯ-ಸಂಬಂಧಿತ ಉದ್ಯಮಗಳಿಗಾಗಿ ಒಡಿಶಾ, ಉತ್ತರ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಿಹಾರ ರಾಜ್ಯಗಳು ದೇಶದ ವಿವಿಧ ಭಾಗಗಳಿಗೆ ತಮ್ಮ ಕಾರ್ಮಿಕರನ್ನು ಕಳುಹಿಸುವ ಪ್ರಮುಖ ರಾಜ್ಯಗಳಾಗಿವೆ. ಆದರೆ ಲಾಕ್‌ಡೌನ್ ವೇಳೆ ಕೆಲಸ ಕಳೆದುಕೊಂಡು, ಊಟಕ್ಕೂ ಗತಿಯಿಲ್ಲದೆ ವಲಸಿಗರು ತಮ್ಮೂರೆಡೆಗೆ ಮುಖ ಮಾಡಿದ್ದರು. ಈಗಲೂ ಕೂಡ ಶ್ರಮಿಕ್ ಎಕ್ಸ್ಪ್ರೆಸ್ ರೈಲಿನ ಮೂಲಕ ಹಿಂದಿರುಗಿ ಬರುತ್ತಲೇ ಇದ್ದಾರೆ. ನಿರ್ಮಾಣ ಕಾರ್ಯಗಳನ್ನು ಮಾಡಲು ಶೇ.70 ರಷ್ಟು ಕಾರ್ಮಿಕರ ಕೊರತೆ ಎದುರಾಗಿದೆ ಎಂದು ರಾಷ್ಟ್ರದಾದ್ಯಂತ ಶಾಖೆಗಳನ್ನು ಹೊಂದಿರುವ ಬಿಲ್ಡರ್ಸ್ ಅಸೋಸಿಯೇಷನ್ ತಿಳಿಸಿದೆ.
ನಿರ್ಮಾಣ ವಲಯ:
ದೆಹಲಿ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ಪಂಜಾಬ್ ರಾಜ್ಯಗಳಲ್ಲಿ ವಲಸೆ ಕಾರ್ಮಿಕರು ನಿರ್ಮಾಣ ಕಾರ್ಯಗಳಲ್ಲಿ ಭಾಗಿಯಾಗಿದ್ದರು. ಕಟ್ಟಡ ನಿರ್ಮಾಣ ಕಾರ್ಯಗಳ ಹೊರತಾಗಿ, ಅವರು ಸರ್ಕಾರಿ ಮತ್ತು ಖಾಸಗಿ ಮೂಲಸೌಕರ್ಯ ಯೋಜನೆಗಳಲ್ಲೂ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್ ಕಾರಣ, ಹೆಚ್ಚಿನ ವಲಸಿಗರು ತಮ್ಮ ಮೂಲ ರಾಜ್ಯಗಳಿಗೆ ಮರಳಿದ್ದಾರೆ. ಹೀಗಾಗಿ ನಾವು ಮಾನವ ಸಂಪನ್ಮೂಲದ ಕೊರತೆ ಎದುರಿಸುತ್ತಿದ್ದೇವೆ. ನಿರ್ಮಾಣ ಕಾರ್ಯಗಳನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದ್ದರೂ, ಕಾರ್ಮಿಕರಿಲ್ಲದೇ ಯೋಜನೆಗಳು ಪೂರ್ಣವಾಗದೆ ನಿಂತಿವೆ. ಈ ವರ್ಷದೊಳಗಾಗಿ ಕೆಲಸಗಳು ಮುಗಿಸಲಾಗುತ್ತದೇಯೋ ಇಲ್ಲವೋ ಎಂಬ ಭಯ ಶುರುವಾಗಿದೆ ಎಂದು ದೆಹಲಿಯ ಬಿಲ್ಡರ್ಸ್ ಅಸೋಸಿಯೇಷನ್‌ನ ಹಿರಿಯ ಪದಾಧಿಕಾರಿ ಹೇಳುತ್ತಾರೆ.
ಜವಳಿ ಉದ್ಯಮ:
ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ದೇಶದ ಪ್ರಮುಖ ಜವಳಿ ಕೇಂದ್ರಗಳಾಗಿವೆ. ಈ ಉದ್ಯಮದಲ್ಲಿ ವಲಸೆ ಕಾರ್ಮಿಕರು ಬಟ್ಟೆಗಳಿಗೆ ಬಣ್ಣ ಹಾಕುವುದು, ಹೊಲಿಗೆ, ಗೋದಾಮಿನ ನಿರ್ವಹಣೆ ಸೇರಿ ಇತರ ಕೆಲಸಗಳನ್ನು ಮಾಡುತ್ತಾರೆ. ಲಾಕ್‌ಡೌನ್ ಸಡಿಲಿಸಲಾಗಿದ್ದರೂ ಅವರ ಅನುಪಸ್ಥಿತಿಯಿಂದಾಗಿ ಕೆಲಸಗಳು ಸ್ಥಗಿತಗೊಂಡಿವೆ. ಕಾರ್ಮಿಕರಿಲ್ಲದೆ ದಿನದ ಒಂದು ಶಿಫ್ಟ್ ನಡೆಸುವುದು ಕೂಡ ತುಂಬಾ ಕಷ್ಟವಾಗಿದೆ ಎಂದು ಪೂರೈಕೆದಾರರು ಹೇಳುತ್ತಿದ್ದಾರೆ ಎಂದು ದೆಹಲಿ ಮೂಲದ ಉದ್ಯಮಿ ಆರ್ ಸುಜನ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.