ಚೆನ್ನೈ (ತಮಿಳುನಾಡು) : ಅಧಿಕಾರ ದಾಹದಿಂದಾಗಿ ಕಾಂಗ್ರೆಸ್ ಸರ್ಕಾರ 45 ವರ್ಷಗಳ ಹಿಂದೆ ಈ ದಿನ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಜನರ ಹಕ್ಕುಗಳನ್ನು ಕಸಿದುಕೊಂಡಿತ್ತು. ಈಗ ಅದೇ ಪಕ್ಷ ಪ್ರಜಾಪ್ರಭುತ್ವ ಅಪಾಯದಲ್ಲಿರುವುದಾಗಿ ಹೇಳುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
1975 ರ ಜೂನ್ 25 ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿರುವುದನ್ನು ನೆನಪಿಸಿಕೊಂಡ ಅವರು, ಅಧಿಕಾರದ ಹಸಿವಿನಿಂದ ಕಾಂಗ್ರೆಸ್ ಪಕ್ಷವು ತುರ್ತು ಪರಿಸ್ಥಿತಿ ಘೋಷಿಸಿತ್ತು. ಅದು ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲನ್ನು ಹಾಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ತಮಿಳುನಾಡು ಬಿಜೆಪಿ ಘಟಕದ ಕಾರ್ಯಕರ್ತರನ್ನುದ್ದೇಶಿಸಿ ವರ್ಚುವಲ್ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ಜನರ ಹಕ್ಕುಗಳನ್ನು ಸಂಪೂರ್ಣವಾಗಿ ತಿರಸ್ಕರಿ ಯಾಕೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿತ್ತು ಎಂದು ಪ್ರಶ್ನಿಸಿದರು. ಅಧಿಕಾರಕ್ಕಾಗಿ ಹಾತೊರೆದ ಕಾಂಗ್ರೆಸ್ , ಕಾನೂನು ಮುರಿದು ತುರ್ತು ಈ ನಿಯಮ ಜಾರಿಗೆ ತಂದಿತ್ತು ಎಂದು ಆರೋಪಿಸಿದ್ದಾರೆ.
ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಹಲವಾರು ದೌರ್ಜನ್ಯಗಳು ನಡೆಯಿತು. ವಿರೋಧ ಪಕ್ಷದ ಹಲವು ನಾಯಕರನ್ನು ಜೈಲಿಗಟ್ಟಲಾಯಿತು. ಮುಖ್ಯಮಂತ್ರಿ ದಿವಂಗತ ಎಂ ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರವನ್ನು ವಜಾಗೊಳಿಸಲಾಗಿತ್ತು. ಡಿಎಂಕೆ ಮುಖಂಡ, 'ಮೇಯರ್' ಚಿಟ್ಟಿಬಾಬು ಜೈಲಿನಲ್ಲಿ ಚಿತ್ರಹಿಂಸೆ ಸಹಿಸಲಾಗದೇ ನಿಧನರಾಗಿದ್ದರು. ಕಾಂಗ್ರೆಸ್ ಇಂದು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದೆ. ಇನ್ನೂ ಅಚ್ಚರಿ ಎಂದರೆ, ಡಿಎಂಕೆ ಅದೇ ಕಾಂಗ್ರೆಸ್ನೊಂದಿಗೆ ಕೈಜೋಡಿಸಿದೆ ಎಂದು ಟೀಕಾ ಪ್ರಹಾರ ನಡೆಸಿದರು.