ರತ್ಲಂ (ಮಧ್ಯ ಪ್ರದೇಶ):ಕಾಂಗ್ರೆಸಿಗರು ಬಿಜೆಪಿಯ ಮಡಿಲ ಮೇಲೆ ಕುಳಿತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಖಾನ್ ಹೇಳಿಕೆ ನೀಡಿದ್ದು, ತಮ್ಮ ಪಕ್ಷದವರ ವಿರುದ್ಧವೇ ಗುಡುಗಿದ್ದಾರೆ.
ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರುದ್ಧ ಮಧ್ಯಪ್ರದೇಶದ ರತ್ಲಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಖಾನ್, ಈ ದೇಶ ಗಾಂಧೀಜಿಯವರ ಆದರ್ಶಗಳ ಮೇಲೆ ನಿಂತಿದೆಯೇ ಹೊರತು ಗೋಡ್ಸೆ ಆದರ್ಶದ ಮೇಲಲ್ಲ. ಕಾಂಗ್ರೆಸ್ ನಾಯಕರೇ ನೀವೆಲ್ಲಾ ಎಲ್ಲಿದ್ದೀರಾ? ಮನೆಗಳಲ್ಲಿ ಏಕೆ ಅಡಗಿ ಕುಳಿತಿದ್ದೀರಾ? ಒಂದು ಕಡೆ ದ್ವೇಷವನ್ನ ಪಸರಿಸಲಾಗುತ್ತಿದ್ದು, ನೀವು ಮಾತ್ರ ಮೌನವಾಗಿದ್ದೀರ. ನೀವು ಹೀಗೆ ಮೌನವಾಗಿದ್ದರೆ ದ್ವೇಷವನ್ನ ಪಸರಿಸುತ್ತಿರುವುದೇ ಕಾಂಗ್ರೆಸ್ ಎಂದು ಜನರು ಭಾವಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರುದ್ಧದ ನಮ್ಮ ಚಳವಳಿ ಬೇರೆ ದಿಕ್ಕಿನಲ್ಲಿ ಸಾಗುತ್ತಿದ್ದು, ಇದರ ಲಾಭವನ್ನ ಬಿಜೆಪಿಯವರು ಪಡೆದುಕೊಳ್ಳುತ್ತಿದ್ದಾರೆ ಎಂದು ಸಿಎಂ ಹೇಳಿದ್ದರು. ಆ ಮಾತು ಸತ್ಯ. ನಾವು ಗಾಂಧಿ-ಅಂಬೇಡ್ಕರ್ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮವರೇ ಬಿಜೆಪಿ ಮಡಿಲ ಮೇಲೆ ಹೋಗಿ ಕುಳಿತಿದ್ದಾರೆ. ಹೀಗಾಗಿಯೇ ನಮ್ಮ ಚಳವಳಿ ಬಲಹೀನವಾಗುತ್ತಿದೆ ಎಂದು ಖಾನ್ ದೂರಿದರು.
ಮಹಿಳೆಯರು ರಸ್ತೆ ಮೇಲೆ ಕುಳಿತು ಪ್ರತಿಭಟಿಸುತ್ತಿದ್ದಾಗ ನೀವೆಲ್ಲಿಗೆ ಹೋಗಿದ್ರಿ? ಎಂದು ಕಾಂಗ್ರೆಸ್ಸಿಗರು ನಿಮ್ಮ ಮನೆ ಬಾಗಿಲಿಗೆ ಬಂದಾಗ ಅವರನ್ನ ಕೇಳಿ ಎಂದು ಜನತೆಗೆ ಹೇಳಿದ ಆರಿಫ್ ಖಾನ್, ನಮ್ಮ (ಕಾಂಗ್ರೆಸ್ಸಿಗರ) ಧ್ವನಿಯನ್ನ ಹತ್ತಿಕ್ಕಲಾಗುತ್ತಿದೆ. ನಾವು ದ್ವೇಷವನ್ನ ಪಸರಿಸುತ್ತಿಲ್ಲ. ನಮ್ಮ ಹೋರಾಟವನ್ನ ಬಿಜೆಪಿಯವರು ಹಿಂದೂ-ಮುಸ್ಲಿಂ ಹೋರಾಟವಾಗಿ ಪರಿವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.