ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲುಂಡ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಭಾರೀ ವಿರೋಧದ ನಡುವೆಯೇ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆ ಇಂದು ನಡೆಯಲಿರುವ ಪಕ್ಷದ ಮಹತ್ವದ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ನೂತನ ವ್ಯಕ್ತಿಯನ್ನು ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ರಾಹುಲ್ ಗಾಂಧಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬಹುದಿನಗಳೇ ಕಳೆದುಹೋಗಿವೆ. ಹೀಗಾಗಿ ಕಾಂಗ್ರೆಸ್‌ನ ಅಧ್ಯಕ್ಷಗಾದಿಗೆ ಯಾರೂ ಇಲ್ಲದೆ ಇದ್ದುದರಿಂದ ಇಂದು ಮಹತ್ವದ ಸ್ಥಾನ ತುಂಬಲು ಆಯ್ಕೆ ನಡೆಯಲಿದೆ.
ಯಾರಾಗಬಹುದು ಕೈ ನಾಯಕ:
ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಮುಕುಲ್ ವಾಸ್ನಿಕ್ ಪ್ರಮುಖ ವ್ಯಕ್ತಿ ಎಂದು ಹೇಳಲಾಗುತ್ತಿದೆ. 59 ವರ್ಷದ ವಾಸ್ನಿಕ್ ಹೆಚ್ಚಿನ ಆಡಳಿತಾತ್ಮಕ ಅನುಭವ ಹೊಂದಿದ್ದು, ಕನಿಷ್ಠ ಸಾಂಸ್ಥಿಕ ಚುನಾವಣೆಯವರೆಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ. ಇದಲ್ಲದೆ ಪ್ರಸ್ತುತ ಇರುವ ಸಾಂಸ್ಥಿಕ ದೌರ್ಬಲ್ಯಗಳನ್ನು ಸರಿಪಡಿಸಲು ಇವರು ಸೂಕ್ತ ವ್ಯಕ್ತಿ ಎನ್ನಲಾಗಿದೆ.
ವಾಸ್ನಿಕ್, ಪಿ.ವಿ.ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ಅವರ ಕಾಂಗ್ರೆಸ್ ಸರ್ಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಸೋನಿಯಾ ಗಾಂಧಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚಿಗೆ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಸಮರ್ಥ:
2014-19 ರ ವರೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರಾಗಿ ಗಮನ ಸೆಳೆದಿದ್ದ ಮಲ್ಲಿಕಾರ್ಜುನ ಖರ್ಗೆ ಆಡಳಿತ ಪಕ್ಷವನ್ನು ಸಮರ್ಥವಾಗಿ ಎದುರಿಸಿದ್ದರು. ಅದಲ್ಲದೆ ಕಾಂಗ್ರೆಸ್‌ನ ಹಿರಿಯ ನಾಯಕರಾಗಿರುವ ಖರ್ಗೆಯವರಿಗೆ ಕಾಂಗ್ರೆಸ್‌ನ ಎಲ್ಲಾ ಸಾಧಕ ಬಾಧಕಗಳು ಗೊತ್ತಿರುವುದರಿಂದ ಇವರನ್ನು ಕಾಂಗ್ರೆಸ್ ಅಧ್ಯಕ್ಷನನ್ನಾಗಿ ಮಾಡುವ ಸಾಧ್ಯತೆ ಇದೆ.
ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದ ಕಾಂಗ್ರೆಸ್ಸಿನ ಹಿರಿಯ ನಾಯಕ. ಸೋಲಿಲ್ಲದ ಸರದಾರ ಎಂದೇ ಖ್ಯಾತಿಯಾಗಿದ್ದ ಖರ್ಗೆ ಅವರು 17ನೇ ಲೋಕಸಭೆಯಲ್ಲಿ ಸೋತು ಮೊದಲ ಬಾರಿಗೆ ಸೋಲಿನ ನೋವು ಕಂಡಿದ್ದಾರೆ. 2009 ರಿಂದ ಸಂಸತ್ತಿನ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದ ಇವರು, ರಾಜ್ಯದ ಹಿರಿಯ ದಲಿತ ರಾಜಕಾರಣಿ ಮತ್ತು 2014 ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಕರ್ನಾಟಕ ಶಾಸನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದರು. ಅದಕ್ಕೂ ಮುಂಚೆ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು.