ನವದೆಹಲಿ: ಕೇಂದ್ರ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಕ್ರೆಡಿಟ್ ರೇಟಿಂಗ್ ಏಜೆನ್ಸಿಯ ಭಯವಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಪ್ರವೀಣ್ ಚಕ್ರವರ್ತಿ, ಕೋವಿಡ್-19 ಮಹಾಮಾರಿಯಿಂದ ಉಂಟಾದ ಆರ್ಥಿಕ ನಷ್ಟ ಸುಧಾರಣೆಯ ಘೋಷಣೆಗಳಿಂದ ಜನತೆಗೆ ಯಾವುದೇ ಪ್ರಯೋಜನವಿಲ್ಲ. ಯಾರು ಸಂಕಷ್ಟದಲ್ಲಿ ಇದ್ದಾರೋ ಅಂತವರ ಖಾತೆಗಳಿಗೆ ನೇರವಾಗಿ ಹಣ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಅಂತಾರಾಷ್ಟ್ರೀಯ ಕ್ರಿಡಿಟ್ ರೇಟಿಂಗ್ ಏಜೆನ್ಸಿಗಳು ದೇಶಕ್ಕೆ ಕಡಿಮೆ ಶ್ರೇಣಿ ನೀಡುತ್ತವೆಯೋ ಎಂಬ ಆತಂಕ ಕೇಂದ್ರ ಸರ್ಕಾರಕ್ಕೆ ಇದೆ. ಹೀಗೆ ಯೋಚನೆ ಮಾಡುವಂತಹ ಸಮಯ ಇದಲ್ಲ. ದೇಶದ ಜನರನ್ನು ಸಂಕಷ್ಟದಿಂದ ಪಾರು ಮಾಡಬೇಕಿರುವ ಸಮಯವಿದು ಎಂದು ನಿರ್ಮಲಾ ಸೀತಾರಾಮನ್ ಅವರಿಗೆ ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಹಳೆಯ ಯೋಜನೆಗಳನ್ನು ಸ್ವಲ್ಪ ಬದಲಾವಣೆ ಮಾಡಿ ಪುನಃ ಘೋಷಿಸಲಾಗುತ್ತಿದೆ. ಇಂದಿನ ಘೋಷಣೆಯಲ್ಲಿ ಯಾವುದೇ ಹೊಸ ಅಂಶಗಳಿಲ್ಲ ಎಂದು ಆರೋಪಿಸಿದ್ದಾರೆ.
ವಲಸೆ ಕಾರ್ಮಿಕರು, ರೈತರು, ದಿನಸಿ ವ್ಯಾಪಾರಿಗಳು, ಮಧ್ಯಮ ವರ್ಗದ ಜನರಿಗೆ ಇಂದಿನ ಪ್ಯಾಕೇಜ್‌ನಿಂದ ಏನು ನೆರವಾಗುತ್ತೆ. ಈಗಾಗಲೇ 14 ಕೋಟಿ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಇವರಿಗೆ ಪ್ಯಾಕೇಜ್ ಏನು ಕೊಟ್ಟಿದ್ದೀರಾ ಎಂದು ಪಕ್ಷದ ಮತ್ತೊಬ್ಬ ವಕ್ತಾರ ಗೌರವ್ ವಲ್ಲಭ ಪ್ರಶ್ನಿಸಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಹೆಚ್ಚಳವನ್ನು ಸಹ ಗೌರವ್ ವಿರೋಧಿಸಿದ್ದಾರೆ.