ನವದೆಹಲಿ:ಬಿಹಾರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಿನಿಂದಲೇ ಪ್ರಚಾರ ಆರಂಭಿಸಲಿದೆ. ಈ ಬಾರಿ ನಿತೀಶ್ ಕುಮಾರ್ ಹಾಗೂ ಬಿಜೆಪಿ ನೇತೃತ್ವದ ಸರ್ಕಾರವನ್ನ ಕೆಳಗಿಳಿಸಲು ಕೈ ಪಕ್ಷ ಭರ್ಜರಿ ಪ್ಲಾನ್ ಹೆಣೆಯುವ ಸನ್ನಾಹದಲ್ಲಿದೆ.
ಇಂದಿನಿಂದ ಕಾಂಗ್ರೆಸ್ ತನ್ನ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಲಿದೆ. ಪಕ್ಷದ ಮುಖಂಡ ರಾಹುಲ್ ಗಾಂಧಿ ಗುರುವಾರ ವರ್ಚುವಲ್ 'ರ‍್ಯಾಲಿಯನ್ನು' ಉದ್ದೇಶಿಸಿ ಮಾತನಾಡಲಿದ್ದು, ರಾಜ್ಯದ ವಿವಿಧ ವಿಭಾಗಗಳ ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಜನರಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆಯೂ ಅವರು ಚರ್ಚಿಸಲಿದ್ದಾರೆ. ರಾಹುಲ್ ರಾಜ್ಯ ಕಾಂಗ್ರೆಸ್ ಮುಖ್ಯಸ್ಥರು, ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರನ್ನು ಒಳಗೊಂಡು ನಾಲ್ಕು ಕಾರ್ಯಕಾರಿ ಅಧ್ಯಕ್ಷರೊಂದಿಗೆ ಸಂವಹನ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಬಿಹಾರ ಉಸ್ತುವಾರಿ ಶಕ್ತಿ ಸಿನ್ಹ್ ಗೋಹಿಲ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರವಾಹದಿಂದ ಉಂಟಾದ ನಷ್ಟ, ಕೊರೊನಾ ವೈರಸ್ ಬಿಕ್ಕಟ್ಟು ಮತ್ತು ಚುನಾವಣೆ ಸಿದ್ಧತೆಗಳ ಬಗ್ಗೆ ಈ ಸಭೆಯಲ್ಲಿ ರಾಹುಲ್ ಚರ್ಚಿಸಲಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಬಿಹಾರದಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಏಕಾಂಗಿಯಾಗಿ ಹೋರಾಟ ಮಾಡಲಿದೆಯಾ ಅಥವಾ ಪ್ರತ್ಯೇಕವಾಗಿ ಸ್ಪರ್ಧಿಸಲಿದೆಯಾ ಎಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ.
2015 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 'ಮಹಾಘಟಬಂಧನ್' ರಚಿಸಿಕೊಂಡು ಸಂಯುಕ್ತ ಜನತಾದಳ - ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಬಿಜೆಪಿಗೆ ಬುದ್ದಿ ಕಲಿಸಲು ಮಹಾಘಟಬಂಧನ ಯಶಸ್ವಿಯಾಗಿತ್ತು. ಆದರೆ ಬಳಿಕ ನಿತೀಶ್ ಕುಮಾರ್ ಮಹಾಘಟಬಂಧನ್ ದಿಂದ ಹೊರ ಬಂದು ಎನ್ಡಿಎ ಕೈ ಹಿಡಿದು ಅಧಿಕಾರ ನಡೆಸುತ್ತಿದ್ದಾರೆ.