ನವದೆಹಲಿ:ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಬದಲಾವಣೆ ಮಾಡಬೇಕು ಎಂಬ ಗಂಭೀರ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ಇದೀಗ ಕಾರ್ಯಕಾರಿ ಸಮಿತಿ(ಸಿಡಬ್ಲೂಸಿ) ಮತ್ತು ಕೇಂದ್ರ ಚುನಾವಣಾ ಪ್ರಾಧಿಕಾರ ಪುನಾರಚನೆ ಮಾಡಿ ಕಾಂಗ್ರೆಸ್ ಮಹತ್ವದ ಆದೇಶ ಹೊರಹಾಕಿದೆ.
ಅಖಿತ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿವಿಧ ರಾಜ್ಯಗಳ ಉಸ್ತುವಾರಿಗಳನ್ನ ಹೊಸದಾಗಿ ನೇಮಕ ಮಾಡಿರುವ ಕಾಂಗ್ರೆಸ್ ಕೆಲ ಹಿರಿಯ ಅಧಿಕಾರಿಗಳಿಗೆ ಕೊಕ್ ನೀಡಿದೆ. ಪ್ರಮುಖವಾಗಿ ಗುಲಾಂ ನಬಿ ಆಜಾದ್, ಅಂಬಿಕಾ ಸೋನಿ, ಮೋತಿ ಲಾಲ್ ವೋಹ್ರಾ, ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯಿಂದ ಕೈಬಿಡಲಾಗಿದೆ.
ರಣದೀಪ್ ಸಿಂಗ್ ಸುರ್ಜೆವಾಲಗೆ ಕರ್ನಾಟಕದ ಉಸ್ತುವಾರಿ ನೀಡಲಾಗಿದ್ದು, ಈ ಮೂಲಕ ಕೆ.ಸಿ ವೇಣುಗೋಪಾಲ್ ರಾಜ್ಯದ ಉಸ್ತುವಾರಿ ಸ್ಥಾನ ಬಿಟ್ಟುಕೊಡಲಿದ್ದಾರೆ. ರಾಜ್ಯದ ದಿನೇಶ್ ಗುಂಡೂರಾವ್ ಅವರಿಗೆ ತಮಿಳುನಾಡು, ಪಾಂಡಿಚೇರಿ ಹಾಗೂ ಗೋವಾ ಉಸ್ತುವಾರಿ ನೀಡಲಾಗಿದೆ. ಹೆಚ್.ಕೆ ಪಾಟೀಲ್ ಅವರಿಗೆ ಮಹಾರಾಷ್ಟ್ರ ಉಸ್ತುವಾರಿ, ಪ್ರಿಯಾಂಕಾ ಗಾಂಧಿ ವಾದ್ರಾಗೆ ಉತ್ತರಪ್ರದೇಶ ಉಸ್ತುವಾರಿ, ಅಜಯ್ ಮಾಕೇನ್ ರಾಜಸ್ತಾನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹರೀಶ್ ರಾವತ್ ಪಂಜಾಬ್, ಓಮನ್ ಚಂಡಿ ಆಂಧ್ರಪ್ರದೇಶ, ಜೀತೇಂದ್ರ ಸಿಂಗ್ ತೋಮರ್ ಅಸ್ಸೋಂ, ಮುಕುಲ್ ವಾಸ್ನಿಕ್ ಮಧ್ಯಪ್ರದೇಶದ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಮಾಜಿ ಸಚಿವ ಕೃಷ್ಣ ಬೈರೇಗೌಡ ಎಐಸಿಸಿ ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಎ.ಕೆ. ಆ್ಯಂಟನಿ, ಅಹ್ಮದ್ ಪಟೇಲ್, ಅಂಬಿಕಾ ಸೋನಿ, ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಪ್ರಿಯಾಂಕಾ ಗಾಂಧಿ, ತುರುಣ್ ಗೋಗಯ್ ಸೇರಿ 22 ಮುಖಂಡರಿಗೆ ಜವಾಬ್ದಾರಿ ನೀಡಲಾಗಿದೆ.