ನವದೆಹಲಿ: ಕಾಂಗ್ರೆಸ್ ತನ್ನ ಅವನತಿಗೆ ಸಂಬಂಧಿಸಿದಂತೆ ಆಳವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಹೇಳಿದರು.
ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ರಾಜೀನಾಮೆ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜ್ಯೋತಿರಾದಿತ್ಯ ಸಿಂಧಿಯಾ ಜೊತೆ ಅನೇಕ ಶಾಸಕರು ಯಾವಾಗ ಪಕ್ಷದಿಂದ ನಿರ್ಗಮಿಸಿದರೋ ಆಗಲೇ ಕಮಲ್ ನಾಥ್ ಸರ್ಕಾರದ ಪತನ ಆರಂಭವಾಗಿತ್ತು. ಇಂತಹ ಅವಕಾಶಕ್ಕಾಗಿಯೇ ಬಿಜೆಪಿ ಕಾಯುತ್ತಿತ್ತು ಎಂದ ಅವರು, ಕಾಂಗ್ರೆಸ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸರಿಯಾದ ಸಮಯ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್ ತನ್ನ ಪಕ್ಷದ ಬಗ್ಗೆ ಸಂಪೂರ್ಣವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮಧ್ಯಪ್ರದೇಶದಲ್ಲಿ ಮಾತ್ರವಲ್ಲದೇ ಹಲವು ರಾಜ್ಯಗಳಲ್ಲೂ ಇದೇ ರೀತಿಯ ಪರಿಸ್ಥಿತಿಗೆ ಕಾಂಗ್ರೆಸ್ ಸಾಕ್ಷಿಯಾಗಿದೆ" ಎಂದರು. ಅಲ್ಲದೇ ಬಿಜೆಪಿ ಎಲ್ಲೆಡೆ ಪಕ್ಷದ ನಾಯಕರುಗಳಿಗೆ ಗಾಳ ಹಾಕಿ, ವಂಚನೆಯ ಮೂಲಕ ಸರ್ಕಾರವನ್ನು ರಚಿಸಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಮಲ್ ನಾಥ್ ರಾಜ್ಯ ವಿಧಾನ ಸಭೆಯಲ್ಲಿ ಸಂಖ್ಯಾ ಬಲ ಸಾಬೀತು ಪಡಿಸುವ ಮುನ್ನವೇ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದರು. ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 25 ತಿಂಗಳ ನಂತರ ತಮ್ಮ ಉನ್ನತ ಹುದ್ದೆಗೆ ಇಂದು ರಾಜೀನಾಮೆ ನೀಡಿದರು.
ಇತರ ರಾಜ್ಯಗಳಾದ ಕರ್ನಾಟಕ, ಗೋವಾ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲೂ ಕಾಂಗ್ರೆಸ್ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದೆ ಎಂಬುದನ್ನು ಗಮನಿಸಬೇಕಿದೆ.