ನವದೆಹಲಿ: ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ದೀಪೇಂದರ್ ಹೂಡಾ ಮತ್ತು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕೆ.ಟಿ.ಎಸ್.ತುಳಸಿ ಸೇರಿದಂತೆ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಗುರುವಾರ 12 ಅಭ್ಯರ್ಥಿಗಳನ್ನು ಘೋಷಿಸಿದೆ.
ಕಾಂಗ್ರೆಸ್ ಮಧ್ಯಪ್ರದೇಶದ ಅಭ್ಯರ್ಥಿಗಳಾಗಿ ದಿಗ್ವಿಜಯ ಸಿಂಗ್ ಮತ್ತು ಪೂಲ್ ಸಿಂಗ್ ಬಾರೈಯಾ ಅವರನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಸುಮೇರ್ ಸಿಂಗ್ ಸೋಲಂಕಿ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಿದೆ.
ಮಾರ್ಚ್ 26ರಂದು ನಡೆಯುವ ರಾಜ್ಯಸಭಾ ಚುನಾವಣೆಗೆ ಒಂಭತ್ತು ಅಭ್ಯರ್ಥಿಗಳ ಉಮೇದುವಾರಿಕೆಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೊದಲು ಅನುಮೋದಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜ್ಯಸಭೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಮಧ್ಯಪ್ರದೇಶದ ಇಬ್ಬರು ಅಭ್ಯರ್ಥಿಗಳನ್ನು ಮಾತ್ರ ರಾಜ್ಯಸಭೆಗೆ ಕಾಂಗ್ರೆಸ್ ಆಯ್ಕೆ ಮಾಡಿದೆ. ಮಧ್ಯಪ್ರದೇಶದ ಸಿಂಗ್ ಮತ್ತು ಬಾರೈಯಾ ಅವರನ್ನು ಹೊರತುಪಡಿಸಿದರೆ ಛತ್ತೀಸ್‌ಘಡದ ತುಳಸಿ ಮತ್ತು ಫುಲೋ ದೇವಿ ನೇತಮ್, ಜಾರ್ಖಂಡ್‌ನ ಶಹಜಾದ ಅನ್ವರ್, ಮಹಾರಾಷ್ಟ್ರದ ರಾಜೀವ್ ಸತವ್, ರಾಜಸ್ಥಾನದ ವೇಣುಗೋಪಾಲ್ ಮತ್ತು ಮೇಘಾಲಯದ ಕೆನಡಿ ಕಾರ್ನೆಲಿಯಸ್ ಖೈರಿಯಮ್ ಅವರ ಹೆಸರನ್ನು ಘೋಷಿಸಿದೆ.
ಬಳಿಕ ಪಕ್ಷವು ಇನ್ನೂ ಮೂರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಹರಿಯಾಣದ ಹೂಡಾ, ಗುಜರಾತ್‌ನ ಶಕ್ತಿಶಿಂಹ್ ಗೋಹಿಲ್ ಮತ್ತು ಭಾರತ್ಸಿಂಹ್ ಸೋಲಂಕಿ ಅವರನ್ನು ಆಯ್ಕೆ ಮಾಡಿದೆ.
ಹಿರಿಯ ಮುಖಂಡ ಮತ್ತು ಕೇಂದ್ರ ಮಾಜಿ ಸಚಿವ ಕುಮಾರಿ ಸೆಲ್ಜಾ ಅವರ ಬದಲು ಪಕ್ಷವು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಪುತ್ರ ದೀಪೇಂದರ್ ಹೂಡಾ ಅವರನ್ನು ರಾಜ್ಯಸಭೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮೂಲಕ ಯುವ ಮುಖಕ್ಕೆ ಮಣೆ ಹಾಕಿದೆ. ಈ ಮೂಲಕ ಒಟ್ಟು 12 ಅಭ್ಯರ್ಥಿಗಳ ಪಟ್ಟಿಯನ್ನು ನಿನ್ನೆ ಕಾಂಗ್ರೆಸ್ ಬಿಡುಗಡೆಗೊಳಿಸಿದೆ.
ರಾಜ್ಯಸಭೆಗೆ ಸ್ಪರ್ಧಿಸಲು ಅನೇಕರು ಉಸ್ತುಕರಾಗಿದ್ದಾರೆ. ಆದರೆ ಪಕ್ಷವು ತಾಯಿಯಂತೆ. ಅದು ಎಲ್ಲಕ್ಕಿಂತ ದೊಡ್ಡದು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಂಡು ಪಕ್ಷಕ್ಕೆ ಸೇವೆ ಸಲ್ಲಿಸಬೇಕು ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೇವಾಲಾ ತಿಳಿಸಿದ್ದಾರೆ.