ನವದೆಹಲಿ:ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ಆಡಳಿತ ಪಕ್ಷ ಆಮ್ ಆದ್ಮಿ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿರುಸಿನ ಪ್ರಚಾರ ನಡೆಸಿವೆ.
ಇದರ ಮಧ್ಯೆ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿ ಹಿರಿಯ ಮುಖಂಡರಿಗೆ ಆಫರ್ ನೀಡಿದ್ದು, ಲೋಕಸಭೆಯಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ಈ ಸಲದ ವಿಧಾನಸಭೆಯಲ್ಲೂ ಕಣಕ್ಕಿಳಿಯುವಂತೆ ಸೂಚನೆ ನೀಡಿದ್ದಾರೆ.
ಫೆಬ್ರವರಿ 8 ರಂದು ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಮತದಾನ ನಡೆಯಲಿದ್ದು, 11ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಕಳೆದ 2015ರ ವಿಧಾನಸಭಾ ಚುನಾವನೆಯಲ್ಲಿ ಕನಿಷ್ಠ ಒಂದು ಸ್ಥಾನವನ್ನು ಗೆಲ್ಲುವಲ್ಲೂ ರಾಷ್ಟ್ರಿಯ ಪಕ್ಷ ಕಾಂಗ್ರೆಸ್ ವಿಫಲವಾಗಿತ್ತು. ಹೀಗಾಗಿ ಆಡಳಿತರೂಢ ಎಎಪಿ ಹಾಗೂ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ರಾಷ್ಟ್ರೀಯ ನಾಯಕಿ ಭಾರಿ ಕಸರತ್ತು ನಡೆಸಿದ್ದು, ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ 2015ರ ವಿಧಾನಸಭಾ ಚುನಾವಣೆಯಲ್ಲಿ, ಒಟ್ಟು 70 ಕ್ಷೇತ್ರಗಳಲ್ಲಿ 67 ಕ್ಷೇತ್ರಗಳಲ್ಲಿ ಗೆದ್ದ ಆಮ್ ಆದ್ಮಿ ಪಾರ್ಟಿ ಸರ್ಕಾರ ರಚಿಸಿತ್ತು. ರಾಷ್ಟ್ರೀಯ ಪಕ್ಷ ಬಿಜೆಪಿ ಕೇವಲ 3 ಕ್ಷೇತ್ರಗಳಲ್ಲಿ ಗೆದ್ದರೆ, 1998ರಿಂದ 2013ರವರೆಗೂ 15 ವರ್ಷ ರಾಜಧಾನಿಯಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಕೈ ಪಾಳಯ ಒಂದೂ ಕ್ಷೇತ್ರವನ್ನೂ ಗೆಲ್ಲಲಾಗದೆ ಮುಜುಗರಕ್ಕೊಳಗಾಗಿತ್ತು.